ರಾಜಸ್ಥಾನದ ಅಲ್ವಾರ್, ಧೋಲ್ಪುರ್ ಜಿಲ್ಲಾ ಪಂಚಾಯತ್ ರಾಜ್ ಚುನಾವಣೆ: ಹೆಚ್ಚಿನ ಸ್ಥಾನ ಗೆದ್ದ ಕಾಂಗ್ರೆಸ್

Update: 2021-10-29 17:26 GMT

ಜೈಪುರ: ಆಲ್ವಾರ್ ಹಾಗೂ  ಧೋಲ್ಪುರ್ ಜಿಲ್ಲಾ ಪರಿಷತ್ ಸದಸ್ಯರಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ.

ಎರಡೂ ಜಿಲ್ಲೆಗಳಾದ ಧೋಲ್‌ಪುರ ಮತ್ತು ಅಲ್ವಾರ್‌ನ 22 ಪಂಚಾಯತ್ ಸಮಿತಿಗಳ 492 ಸ್ಥಾನಗಳ ಪೈಕಿ 491 ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಕಾಂಗ್ರೆಸ್ 208, ಬಿಜೆಪಿ 158, ಬಿಎಸ್‌ಪಿ 12 ಮತ್ತು ಸ್ವತಂತ್ರರು 113 ಸ್ಥಾನಗಳನ್ನು ಗೆದ್ದಿವೆ.

ಮೂರು ಹಂತಗಳಲ್ಲಿ ನಡೆದ ಎರಡು ಜಿಲ್ಲೆಗಳ ಪಂಚಾಯತ್ ಸಮಿತಿ ಹಾಗೂ  ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶವನ್ನು ಶುಕ್ರವಾರ ಮತ ಎಣಿಕೆ ನಂತರ ಪ್ರಕಟಿಸಲಾಯಿತು.

"ಅಲ್ವಾರ್ ಹಾಗೂ  ಧೋಲ್ಪುರ್ ಜಿಲ್ಲೆಗಳ ಪಂಚಾಯತ್ ರಾಜ್ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತ ಪಡೆದಿದೆ. ವಿಜಯಕ್ಕಾಗಿ ಎಲ್ಲಾ ಮತದಾರರಿಗೆ ಧನ್ಯವಾದಗಳು ಹಾಗೂ  ಕಾರ್ಯಕರ್ತರಿಗೆ ಧನ್ಯವಾದಗಳು'' ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಈ ಫಲಿತಾಂಶ ಬಿಜೆಪಿಗೆ ಕನ್ನಡಿ ಹಿಡಿದಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಹೇಳಿದ್ದಾರೆ.

ಅಲ್ವಾರ್ ಜಿಲ್ಲಾ ಪರಿಷತ್ತಿನ 49 ಸದಸ್ಯರ ಪೈಕಿ ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ 21 ಸ್ಥಾನಗಳನ್ನು ಪಡೆದುಕೊಂಡಿದೆ.  ನಾಲ್ಕುಸ್ಥಾನಗಳಲ್ಲಿ  ಸ್ವತಂತ್ರರು ಗೆದ್ದಿದ್ದಾರೆ.

ಧೋಲ್ಪುರದಲ್ಲಿ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದುಕೊಂಡರೆ ಉಳಿದ 6 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.

ಆಲ್ವಾರ್ ಜಿಲ್ಲಾ ಪರಿಷತ್‌ನಲ್ಲಿ ಆಡಳಿತ ಪಕ್ಷವು ಪೂರ್ಣ ಬಹುಮತ ಹೊಂದಿದ್ದು, ಧೋಲ್‌ಪುರ್ ಜಿಲ್ಲಾ ಪರಿಷತ್‌ನಲ್ಲಿ ಅದು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಆಡಳಿತ ನಡೆಸುವ ಸ್ಥಿತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News