ಕೇಸರಿ ಬಣ್ಣ ಅಥವಾ ಅದನ್ನು ಧರಿಸುವವರ ಬಗ್ಗೆ ಕೀಳಾಗಿ ಮಾತನಾಡಲಿಲ್ಲ: ಐವನ್ ಡಿಸೋಜ ಸ್ಪಷ್ಟನೆ

Update: 2021-10-29 17:31 GMT

ಮಂಗಳೂರು, ಅ.29: ಬಿಜೆಪಿ ಪಕ್ಷ ಕೇಸರಿ ಬಣ್ಣವನ್ನು ಬಳಸುತ್ತಿರುವುದರಿಂದ ಸಂವಿಧಾನದಡಿಯಲ್ಲಿ ನ್ಯಾಯ ಒದಗಿಸಬೇಕಾದ ಪೊಲೀಸರು ಠಾಣೆಯಲ್ಲಿ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸುವುದು ಸರಿಯಲ್ಲ ಎಂದು ಹೇಳಿದ್ದೇನೆ ವಿನಹ ಕೇಸರಿ ಬಣ್ಣ ಅಥವಾ ಅದನ್ನು ಧರಿಸುವವರು ಬಗ್ಗೆ ಕೀಳಾಗಿ ಮಾತನಾಡಲಿಲ್ಲ ಎಂದು ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.

ಬಜರಂಗದವರು ದಳದ ಬಗ್ಗೆ ಇತ್ತೀಚೆಗೆ ಸುರತ್ಕಲ್‌ನಲ್ಲಿ ಕುಂದಾಪುರದ ಯುವತಿ ಭಾಷಣ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಟಿವಿ ಚಾನೆಲ್ ಚರ್ಚೆಯಲ್ಲಿ ಉಲ್ಲೇಖ ಮಾಡಿದ್ದೇನೆ ಹೊರತು ಯಾರ ಮೇಲೆಯೂ ದ್ವೇಷದಿಂದ ಹೇಳಿಕೆ ನೀಡಿಲ್ಲ. ಆದರೆ ಬಜರಂಗದ ಕಾರ್ಯಕರ್ತರು ಈ ವಿಚಾರವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ನನ್ನ ಮನೆಯ ಮುಂದೆ ಮುತ್ತಿಗೆ ಹಾಕಲು ಯತ್ನಿಸಿರುವುದು ವಿಷಾದನೀಯ ಎಂದರು.

ನನ್ನ ಹೇಳಿಕೆಯಿಂದ ಬಜರಂಗದಳದವರಿಗೆ ನೋವು ಆಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮದೇ ಸಂಘಟನೆಗೆ ಸೇರಿದ ಮಹಿಳೆಯ ಭಾಷಣದಿಂದ, ನನಗೆ ನೋವಾಗಿರುವುದರ ಬಗ್ಗೆ ನಾನು ಚರ್ಚೆಯಲ್ಲಿ ಉಲ್ಲೇಖ ಮಾಡಿದ್ದೇ ಹೊರತು ಯಾವುದೇ ದುರುದ್ದೇಶದಿಂದ ಅಲ್ಲ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುದರ ಜೊತೆಗೆ ದೀಪಾವಳಿ, ರಮಝಾನ್ ಮತ್ತು ಕ್ರಿಸ್‌ಮಸ್‌ನ್ನು ಕಳೆದ 6 ವರ್ಷದಿಂದ ಬಹಿರಂಗವಾಗಿ ಮತ್ತು ನನ್ನ ಮನೆಯಲ್ಲಿ ಆಚರಣೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ರಾಜಶೇಖರಾನಂದ ಸ್ವಾಮಿಯವರು ನನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿರುವುದು ನನಗೆ ನೋವು ತಂದಿದೆ. ಸ್ವಾಮಿಜಿಯ ಬಾಯಿಯಿಂದ ಈ ಮಾತನ್ನು ನಿರೀಕ್ಷೆ ಮಾಡಿಲ್ಲ. ಸಮಾಜವನ್ನು ತಿದ್ದಿ, ತನ್ನ ಮೌನಕ್ರಾಂತಿಯ ಮೂಲಕ ಸಮಾಜ ಕಟ್ಟುವ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಇಂತಹ ಉದ್ರೇಕಕಾರಿ ಮಾತಿನಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುವುದನ್ನು ಸ್ವಾಮಿಜಿ ತಿಳಿದುಕೊಳ್ಳಬೇಕು ಎಂದು ಐವನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಇಂಟೆಕ್ ಮಾಜಿ ಅಧ್ಯಕ್ಷ ರಾಕೇಶ್ ಮಲ್ಲಿ, ಮುಖಂಡರಾದ ಕಳ್ಳಿಗೆ ತಾರಾನಾಥ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ವಿಕಾಶ್ ಶೆಟ್ಟಿ, ಆಲೆಸ್ಟಿನ್ ಡಿಕೂನ, ಪುನೀತ್ ಶೆಟ್ಟಿ, ಮನುರಾಜ್, ಆಶಿತ್ ಪಿರೇರಾ, ರಮಾನಂದ ಪೂಜಾರಿ, ಮಹೇಶ್ ಕೋಡಿಕಲ್, ಸೌಹಾನ್, ಹಸನ್ ಪನ್ನೀರ್, ಇಸ್ಮಾಯೀಲ್, ಹಬೀಬುಲ್ಲಾ ಕಣ್ಣೂರ್, ನಝೀರ್ ಬಜಾಲ್, ಬಾಝಿಲ್, ಫಯಾಝ್ ಅಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News