ಖಾಝಿ ಸ್ಥಾನ ನಿರ್ವಹಣೆ ಕಠಿಣ ಜವಾಬ್ದಾರಿ: ಜಿಫ್ರಿ ತಂಙಳ್
ಪುತ್ತೂರು: ಖಾಝಿಯ ಸ್ಥಾನ ಎಂಬುದು ಅತ್ಯಂತ ಕಠಿಣ ಜವಾಬ್ದಾರಿಯುತವಾಗಿದೆ. ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನನಗೆ ವಹಿಸಿದ್ದೀರಿ, ಮುಂದಿನ ದಿನಗಳಲ್ಲಿ ಇಸ್ಲಾಮೀ ಚೌಕಟ್ಟಿನಲ್ಲಿ ನಾನು ನಿಮ್ಮ ಸೇವೆಗೈಯ್ಯಲಿದ್ದೇನೆ ಎಂಬ ದೃಡ ವಿಶ್ವಾಸವಿದೆ ಎಂದು ಪುತ್ತೂರು ಮತ್ತು ಸುತ್ತಮುತ್ತಲ ಮೊಹಲ್ಲಾಗಳ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದರು.
ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಶುಕ್ರವಾರ ಅಪರಾಹ್ನ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರ ಖಾಝಿ ಸ್ವೀಕಾರ ಸಮಾರಂಭವು ನಡೆಯಿತು.
ನಾನು ನಂದಿಯಲ್ಲಿ ಮೊದಲ ಬಾರಿಗೆ ಖಾಝಿಯಾಗಿ ನೇಮಕವಾಗಿದ್ದೆ, ಸದ್ಯ ಮುನ್ನೂರಕ್ಕೂ ಮಿಕ್ಕಿ ಮೊಹಲ್ಲಾಗಳ ಖಾಝಿಯಾಗಿದ್ದೇನೆ ಎಂದು ತಿಳಿಸಿದ ಸಯ್ಯದ್ ಜಿಫ್ರಿ ತಂಙಳ್ ಅವರು ಸುನ್ನಿ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ. ನಾವು ಸಜ್ಜನರಾಗಿ ಬಾಳಿ ಬದುಕಬೇಕು, ನಾವು ಉತ್ತಮ ವ್ಯಕ್ತಿಗಳಾದರೆ ನಮಗೆ ಜನ ಗೌರವ ಕೊಡುತ್ತಾರೆ, ನಾವು ಪ್ರತೀಯೊಬ್ಬರೂ ಗೌರವದಿಂದ ಬದುಕುವುದನ್ನು ಮೈಗೂಡಿಸಿಕೊಳ್ಳಬೇಕು. ನನ್ನನ್ನು ಖಾಝಿಯಾಗಿ ಸ್ವೀಕರಿಸಿದ ಪ್ರತೀ ಮೊಹಲ್ಲಾದ ಆಗುಹೋಗುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಪ್ರತಿಯೊಂದು ಕ್ಷೇತ್ರದಲ್ಲೂ ಮೊಹಲ್ಲಾಗಳ ಅಭಿವೃದ್ದಿಗೆ ಶ್ರಮವಹಿಸುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಸಮಾರಂಭ ಉದ್ಘಾಟಿಸಿದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಕಾರ್ಯದರ್ಶಿ ಪಿ ಪಿ ಉಮ್ಮರ್ ಮುಸ್ಲಿಯಾರ್ ಕೊಯ್ಯೋಡ್ ಮುಖ್ಯ ಪ್ರಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹಲವು ಮಂದಿ ಧಾರ್ಮಿಕ ಮುಖಂಡರು, ವಿವಿಧ ಮಸೀದಿಗಳ ಅಧ್ಯಕ್ಷರುಗಳು, ಖತೀಬ್, ಮುದರ್ರಿಸರು ಉಪಸ್ಥಿತರಿದ್ದರು.