ನ.1ರಂದು ಕುದ್ರೋಳಿ ಕ್ಷೇತ್ರದಲ್ಲಿ ‘ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ’
ಮಂಗಳೂರು, ಅ.30: ನಮ್ಮ ಕುಡ್ಲ ಕೇಬಲ್ ಚಾನೆಲ್ ವತಿಯಿಂದ ನಡೆಯುವ ಗೂಡುದೀಪ ಸ್ಪರ್ಧೆ ನ.1ರಂದು ಕುದ್ರೋಳಿ ಕ್ಷೇತ್ರದಲ್ಲಿ ನಡೆಯಲಿದೆ ಎಂದು ನಮ್ಮಕುಡ್ಲದ ನಿರ್ದೇಶಕ ಹರೀಶ್ ಬಿ. ಕರ್ಕೇರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸ್ಪರ್ಧೆಯು ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ಬೆಳ್ಳಿಯ ಪದಕ ಹಾಗೂ ನೂರಕ್ಕಿಂತಲೂ ಹೆಚ್ಚು ಮೆಚ್ಚುಗೆ ಪಡೆದ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದವರು ಹೇಳಿದರು.
ಗೂಡುದೀಪ ಸ್ಪರ್ಧೆಯ ವಿವಿಧ ವಿಭಾಗಗಳ ಸಾಧಕರಿಗೆ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿದೆ. ತುಳುನಾಡಿನಲ್ಲಿ ಹುಟ್ಟಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರಿಗಾಗಿ ನೀಡಲಾಗುವ ‘ನಮ್ಮ ತುಳುವರ್’ ಪ್ರಶಸ್ತಿಗೆ ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಭಾರತ್ ಗೌರವ್ ರತ್ನ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರಿಗೆ ನೀಡಲಾಗುತ್ತದೆ. 40 ವರ್ಷಗಳಿಂದ ಭೂತಾರಾಧನೆಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜತೆಗೆ ಜನಪದ ವಿದ್ವಾಂಸರಾಗಿ ಗುರುತಿಸಿಕೊಂಡಿರುವ ಜನಪದ ಕಲಾಶ್ರೀ ಬಿರುದಾಂಕಿತ ದೇಜಪ್ಪ ಬಾಚಕೆರೆ, ಶೆಫ್ ಟಾಕ್ ಫುಡ್ ಎಂಡ್ ಹಾಸ್ಪಿಟಾಲಿಟಿ ಸಂಸ್ಥೆ ಕಟ್ಟಿ ಉದ್ಯೋಗ ಮಾಣಕ್ಯ ಪ್ರಶಸ್ತಿ ಪಡೆದಿರುವ ಗೋವಿಂದ ಬಾಬು ಪೂಜಾರಿ, ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರಿಗೆ ‘ನಮ್ಮ ಕುಡ್ಲ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕದ್ರಿ ನವನೀತ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲೆ ಕೊಡಂಕೂರಿನ ನಾಟಿ ವೈದ್ಯ ಶ್ರೀನಿವಾಸ ಪೂಜಾರಿಗೆ ‘ನಮ್ಮ ಕುಡ್ಲ ನಾಟಿ ವೈದ್ಯ’ ಪ್ರಶಸ್ತಿ, ವಿವೇಕ್ ರಾಜ್ ಪೂಜಾರಿಗೆ ‘ನಮ್ಮ ಕುಡ್ಲ ಯುವ ಉದ್ಯಮಿ’ ಪ್ರಶಸ್ತಿ, ವಿಶ್ವ ಹಿಂದೂ ಪರಿಷತ್ ಬಜರಂಗದಳಕ್ಕೆ ‘ಬಿ.ಪಿ. ಕರ್ಕೇರ ಸೇವಾ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಮಾರಂಭ ಅಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ ಎಂದು ಕದ್ರಿ ನವನೀತ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ ಉಪಸ್ಥಿತರಿದ್ದರು.