×
Ad

ಉದ್ದೇಶಿತ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು: ಶರದ್ ಸಾಂಘಿ

Update: 2021-10-30 14:59 IST

ಕೊಣಾಜೆ, ಅ.30: ಯುವ ಸಮುದಾಯ ಜಗತ್ತಿನ ಶಕ್ತಿಯಾಗಿದ್ದಾರೆ. ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉದ್ದೇಶಿತ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಮುಂಬೈಯ ಎನ್ ಟಿಟಿ ಗ್ಲೋಬಲ್ ಲಿಮಿಟೆಡ್ ನ ಸಿಇಒ ಶರದ್ ಸಾಂಘಿ  ಕಿವಿಮಾತು ಹೇಳಿದ್ದಾರೆ.

ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಶನಿವಾರ ಜರುಗಿದ ಬ್ಯಾರೀಸ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 9ನೇ ಹಾಗೂ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್)ನ 2ನೇ ಪದವಿ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವು ಇಂದು ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದ್ದು, ಕಠಿಣ ಪರಿಶ್ರಮದೊಂದಿಗೆ ಅವಕಾಶಗಳ ಸದ್ಬಳಕೆ ಮಾಡುವ ಕೌಶಲ್ಯವು ನಮ್ಮಲ್ಲಿರಬೇಕು. ಆಗುವ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಲು ಕಾಯುತ್ತಾ ಕೂರದೆ ನಾವೇ ಹೊಸ ಬೆಳವಣಿಗೆ ತರುವ ಪ್ರಯತ್ನ ಬೇಕು. ಈ ನಿಟ್ಟಿನಲ್ಲಿ ದೂರದೃಷ್ಟಿಯೊಂದಿಗೆ ಯೋಜನೆ ಹಾಕಿಕೊಂಡು ಅದಕ್ಕಾಗಿ ನಿಷ್ಠೆಯಿಂದ ಕಠಿಣ ಪರಿಶ್ರಮ ಪಡಬೇಕು. ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ಸಹೋದ್ಯೋಗಿಗಳ ಜೊತೆ ಅತ್ಯುತ್ತಮ ಸಂಬಂಧ ಬಹಳ ಮುಖ್ಯ ಎಂದು ಶರದ್ ಸಾಂಘಿ ನೂತನ ಪದವೀಧರರಿಗೆ ಸಲಹೆ ನೀಡಿದರು. 

ಸುರತ್ಕಲ್ ಎನ್ಐಟಿಕೆ ನಿರ್ದೇಶಕ ಡಾ.ಉಮಾಮಹೇಶ್ವರ ರಾವ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪರೀಕ್ಷೆ ನಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಬೇಕು. ಪದವಿಯೊಂದಿಗೆ ನಾವು ಬೆಳೆಸಿಕೊಳ್ಳುವ ಸಾಮರ್ಥ್ಯ, ಜ್ಞಾನ ಹಾಗೂ ಮಾನವೀಯ ಮೌಲ್ಯಗಳು ನಮ್ಮನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಪದವೀಧರರಾದ ಬಳಿಕ ನಮ್ಮ ಕರ್ತವ್ಯದ ಅರಿವನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಇಂದಿನ ಯುವ ಸಮುದಾಯ ನಾಳೆಯ ದೇಶದ ಭವಿಷ್ಯವನ್ನು ಬೆಳಗಿಸುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಸ್ಮಾರ್ಟ್ ಫೋನ್ ಪ್ರತಿಯೊಬ್ಬರಿಗೂ ಬಹಳ ಅಗತ್ಯವಾದುದು. ಆದರೆ ಅದರ ಬಳಕೆ ಸದುಪಯೋಗಕ್ಕೆ ಮಾತ್ರ ಸೀಮಿತವಾಗಿರಲಿ. ಯುವ ಸಮುದಾಯ ಈ ಬಗ್ಗೆ ಎಚ್ಚರಿಕೆಯೊಂದಿಗೆ ಮುನ್ನಡೆಯಬೇಕು. ಯಾಕೆಂದರೆ ಪ್ರತಿಯೊಂದು ಕ್ಷಣವೂ ನಮಗೆ ಅಮೂಲ್ಯವಾದುದು ಎಂದು ಅವರು ಹೇಳಿದರು.

ಕ್ಯಾಲಿಕಟ್ ನ  ಎನ್.ಎಂ.ಸಲೀಂ ಆ್ಯಂಡ್ ಅಸೋಸಿಯೇಟ್ ನ ಆರ್ಕಿಟೆಕ್ಟ್ಸ್ ನ  ಎನ್.ಎಂ.ಸಲೀಮ್, ಶಾಸಕ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಜ್ಞಾನ ಸಂಪಾದನೆ ನಮ್ಮ ಗುರಿಯಾಗಿರಬೇಕೇ ವಿನಃ ಕೇವಲ ಉದ್ಯೋಗ ಅಲ್ಲ. ಪರಿಶುದ್ಧ ಹೃದಯದೊಂದಿಗೆ ಇತರರ ಬಗ್ಗೆ ಪ್ರಾಮಾಣಿಕ ಕಳಕಳಿ ಇಟ್ಟುಕೊಂಡು ಮಾಡುವ ಕೆಲಸ ಯಶಸ್ವಿಯಾಗುತ್ತದೆ. ಜೀವನದಲ್ಲಿ ಸರಿಯಾದ ಧ್ಯೇಯ, ಅದರಲ್ಲಿ ಅಚಲ ವಿಶ್ವಾಸ ಹಾಗೂ ಸತತ ಪ್ರಯತ್ನ ಬಹಳ ಮುಖ್ಯ. ಕಾರ್ಪೊರೇಟ್ ಜವಾಬ್ದಾರಿಗಿಂತ ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳುವುದು ಬಹಳ ಮುಖ್ಯ ಎಂದು ಕಿವಿ ಮಾತು ಹೇಳಿದರು.  

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಸಿದ್ದೀಕ್ ಬ್ಯಾರಿ, ಮಝರ್ ಬ್ಯಾರಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಅಝೀಝ್ ಮುಸ್ತಫ, ಡಾ.ಅಬ್ದುಲ್ಲಾ ಗುಬ್ಬಿ, ಡಾ.ವಸಂತ ಕುಮಾರ್, ಪ್ರೊ.ಝಹೀರ್ ಅಹ್ಮದ್, ಪ್ರೊ.ಅಬ್ಸಾರ್, ಡಾ.ಅಂಜುಮ್ ಖಾನ್, ರುಕ್ಸಾನ, ಪ್ರೊ.ಅನಸ್, ಪ್ರೊ.ದೋಮಾ ಚಂದ್ರಶೇಖರ್, ಡಾ.ಶಮೀರ್, ಪ್ರೊ.ಸಿದ್ದಪ್ಪ, ಪ್ರೊ.ಫಿರ್ದೌಸ್, ಅಶ್ವಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 ಬಿಐಟಿ ಪ್ರಾಂಶುಪಾಲ ಡಾ. ಎಸ್.ಐ.ಮಂಜೂರ್ ಬಾಷಾ ಸ್ವಾಗತಿಸಿದರು. ಬೀಡ್ಸ್ ಪ್ರಾಂಶುಪಾಲ ಆರ್ಕಿಟೆಕ್ಟ್  ಅಶೋಕ್ ಮೆಂಡೊನ್ಸಾ ವಂದಿಸಿದರು. ಆದಿರಾ ಕಾರ್ಯಕ್ರಮ ನಿರೂಪಿಸಿದರು.



ಸಯ್ಯದ್ ಬ್ಯಾರಿ ನಮಗೆ ಸ್ಫೂರ್ತಿ : ಶರದ್ ಸಾಂಘಿ 
ನಾನು ಸಯ್ಯದ್ ಬ್ಯಾರಿ ಹಾಗೂ ಉದ್ಯಮ ರಂಗದಲ್ಲಿ ಅವರ ಅಗಾಧ ಸಾಧನೆಯನ್ನು ಸಮೀಪದಿಂದ ನೋಡಿದ್ದೇನೆ. ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಅವರು ಶಿಕ್ಷಣ ರಂಗದಲ್ಲಿ ಮಾಡಿರುವ ಕ್ರಾಂತಿಕಾರಿ ಕೆಲಸಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ. ಬ್ಯಾರೀಸ್ ಶಿಕ್ಷಣ ಸಂಸ್ಥೆಗಳನ್ನು ನೋಡಿದ ಬಳಿಕ ನಾವೂ ಇಂತಹ ಸಮಾಜಕ್ಕೆ ಕೊಡುಗೆ ನೀಡುವಂತಹ ಕೆಲಸ ಮಾಡಬೇಕು ಎಂದು ನಾನು, ನನ್ನ ಪತ್ನಿ ನಿರ್ಧರಿಸಿದ್ದೇವೆ. 
-ಶರದ್ ಸಾಂಘಿ , ಸಿಇಒ, ಎನ್ ಟಿಟಿ ಗ್ಲೋಬಲ್ ಲಿಮಿಟೆಡ್ , ಮುಂಬೈ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News