ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 2021-22ನೆ ಸಾಲಿನ 194 ಕಾಮಗಾರಿಗಳಲ್ಲಿ 24 ಪೂರ್ಣ: ರತ್ನಾಕರ ಹೆಗ್ಡೆ
ಮಂಗಳೂರು, ಅ.30: ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 2021-22ನೇ ಸಾಲಿನಲ್ಲಿ ವಾರ್ಷಿಕ ನಿಗದಿತ 194 ಕಾಮಗಾರಿಗಳಲ್ಲಿ 24 ಪೂರ್ಣಗೊಂಡಿದ್ದು, 170 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಕಾಮಗಾರಿಗಳ ಪೈಕಿ 35 ಕಾಲುಸಂಕ, 11 ಮೀನು ಮಾರುಕಟ್ಟೆ, 2 ಅಂಗನವಾಡಿ, 92 ರಸ್ತೆ ನಿರ್ಮಾಣ, 13 ತಡೆಗೋಡೆ, ಆವರಣ ಗೋಡೆ, 6 ಸಮುದಾಯ/ ಸಭಾಭವನ, ಯಾತ್ರಿ ನಿವಾಸ, 4 ಬಸ್ ನಿಲ್ದಾಣ, 3 ಸ್ಮಶಾನ, 2 ಶಾಲಾ ಕೊಠಡಿ, 7 ವಾಣಿಜ್ಯ ಸಂಕೀರ್ಣ/ ಥೀಂ ಪಾರ್ಕ್, ರಂಗಮಂದಿರ, 1 ತೂಗುಸೇತುವೆ, 17 ಚಂರಂಡಿ, ಕೆರೆ, ಇಂಟರ್‌ಲಾಕ್, ಶೌಚಾಲಯ, 1 ಹೈಮಾಸ್ಕ್ ಲೈಟ್ ಕಾಮಗಾರಿ ಒಳಗೊಂಡಿದೆ. ಇದರಲ್ಲಿ ನಾಲ್ಕು ಮೀನು ಮಾರುಕಟ್ಟೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
2021-22ನೇ ಸಾಲಿಗೆ ಹೆಚ್ಚುವರಿ ಕಾಮಗಾರಿಗಳಿಗಾಗಿ 150 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಒಣಮೀನು ಸಂಸ್ಕರಣಾ ಘಟಕ, ಕಾಪು ದೀಪಸ್ತಂಭ ಅಭಿವೃದ್ಧಿ, ಡಿಜಿಟಲ್ ಸೈನೇಜ್ ಬೋರ್ಡ್ ಅಳವಡಿಕೆ, ಬಹು ಹಂತಗಳ ಕಾರ್ ಪಾರ್ಕಿಂಗ್ ನಿರ್ಮಾಣ ಮುಂತಾದ ವಿನೂತನ ಯೋಜನೆಗಳ ಪ್ರಾಸ್ತಾಪವಿದೆ. ಗೋವಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಮೂಲಕ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಮುದ್ರ ನೀರಿನ ಗುಣಮಟ್ಟದ ವಿಶ್ಲೇಷಣೆ ನಡೆಸಲು ಯೋಜಿಸಲಾಗಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಈ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಕರಾವಳಿ ಕರ್ನಾಟಕದಲ್ಲಿ ಕೈಗಾರಿಕೆಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಹೂಡಿಕೆದಾರರ ಸಭೆ ನಡೆಸುವ ಪ್ರಸ್ತಾವನೆಯಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವ ಯೋಜನೆಯಡಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ವಿಧಾನ ಅಳವಡಿಸಲಾಗಿದೆ. ಇದರಂತೆ ದ.ಕ. ಮತ್ತು ಉಡುಪಿ ಜಿಲ್ಲೆಗೆ ಸಮುದ್ರ ಆಹಾರ ಮತ್ತು ಸಾಗರ ಉತ್ಪನ್ನ, ಉತ್ತರ ಕನ್ನಡ ಜಿಲ್ಲೆಗೆ ಸಾಂಬಾರು ಪದಾರ್ಥಗಳನ್ನು ಗುರುತಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿ ಪ್ರಾದಿಕಾರವು ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಮೀನುಗಾರಿಕಾ ಇಲಾಖೆ ಜತೆ ಕೈಜೋಡಿಸಿದೆ ಎಂದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆಧುನಿಕ ಕರಾವಳಿ ಮೀನುಗಾರಿಕಾ ಗ್ರಾಮ ನಿರ್ಮಿಸಲು ಮಂಗಳೂರಿನ ಸಸಿಹಿತ್ಲುವಿನಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಯೋಜನೆಗೆ 7.50 ಕೋಟಿ ರೂ. ಮೊತ್ತ ನಿಗದಿಪಡಿಸಲಾಗಿದೆ. 3 ಕೋಟಿ ರೂ. ಮೊತ್ತವನ್ನು ರಾಜ್ಯ ಸರಕಾರ ಭರಿಸಬೇಕಿದೆ. ಮುಂದಿನ ಹಂತದಲ್ಲಿ ಉಡುಪಿಯ ಮಲ್ಪೆ, ಉತ್ತರ ಕನ್ನಡದ ಹೊನ್ನಾವರದಲ್ಲಿ ಮತ್ಸ್ಯ ಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವಿವಿಧ ಯೋಜನೆ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ. ಈ ಪೈಕಿ ಕೃಷಿ ಇಲಾಖೆ ಜತೆಗೂಡಿ ಕರಾವಳಿಯ ಕುಚ್ಚಲಕ್ಕಿಗೆ ಜಿಯೋ ಟ್ಯಾಗಿಂಗ್ ಕೂಡಾ ಸೇರಿದೆ. ಬೆಟ್ಟಂಪಾಡಿಯಲ್ಲಿ 30 ಲಕ್ಷ ವೆಚ್ಚದಲ್ಲಿ ತೂಗುಸೇತುವೆ, ಮಲ್ಪೆಯಲ್ಲಿ ಸೋಲಾರ್ ವ್ಯವಸ್ಥೆಯಲ್ಲಿ ಮೀನು ಒಣಗಿಸುವ ಯೋಜನೆ, ಮಿಯಾವಾಕಿ ಮಾದರಿಯ ನಗರ ಅರಣ್ಯ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ್ರಾಧಿಕಾರದ ಸದಸ್ಯೆಯಾದ ಕೇಸರಿ ಯುವರಾಜ್ ಉಪಸ್ಥಿತರಿದ್ದರು.