×
Ad

ಸುಳ್ಯ ನಗರಕ್ಕೆ ಕಲುಷಿತ ನೀರು ಸರಬರಾಜು: ವಿಪಕ್ಷ ಸದಸ್ಯರಿಂದ ನ.ಪಂ. ಎದುರು ಪ್ರತಿಭಟನೆ

Update: 2021-10-30 18:19 IST

ಸುಳ್ಯ ನಗರ ಪಂಚಾಯಿತಿ ವತಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ಕೆಸರು ಮಿಶ್ರಿತವಾಗಿದ್ದು ಕಲುಷಿತಗೊಂಡಿರುವುದನ್ನು ವಿರೋಧಿಸಿ ನಗರ ಪಂಚಾಯಿತಿ ವಿಪಕ್ಷ ಸದಸ್ಯರು ನಗರ ಪಂಚಾಯಿತಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. 

ಶುದ್ಧ ನೀರು ಕೊಡಿ, ಸುಳ್ಯ ನಗರದ ಜನರನ್ನು ರಕ್ಷಿಸಿ, ನಗರ ಪಂಚಾಯಿತಿ ಸಾಮಾನ್ಯ ಸಭೆ ಕರೆಯಿರಿ, ಆಡಳಿತ ಪಕ್ಷ ರಾಜಿನಾಮೆ ನೀಡಿ ಇತ್ಯಾದಿ ಬೇಡಿಕೆಯ ಫಲಕಗಳನ್ನು ಹಿಡಿದು ಕಾಂಗ್ರೆಸ್ ಸದಸ್ಯರು ಮತ್ತು ಪಕ್ಷೇತರ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಸರು ಮಿಶ್ರಿತ ನೀರು ತುಂಬಿದ ಬಾಟಲಿಗಳನ್ನು ಪ್ರದರ್ಶಿಸಲಾಗಿತ್ತು. ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ಸ್, ಡೇವಿಡ್ ಧೀರಾ ಕ್ರಾಸ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಪ್ರತಿಭಟನೆಯಲ್ಲಿ ಮಾತನಾಡಿದ ನಗರ ಪಂಚಾಯಿತಿ ಸದಸ್ಯ ಎಂ.ವೆಂಕಪ್ಪ ಗೌಡ ಬಿಜೆಪಿ ನೇತೃತ್ವದ ನಗರ ಪಂಚಾಯಿತಿ ಆಡಳಿತ ಮಂಡಳಿ ಜನಪರವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ಪ್ರತಿ ತಿಂಗಳಿಗೊಮ್ಮೆ ನಗರ ಪಂಚಾಯಿತಿ ಸಾಮಾನ್ಯ ಸಭೆ ನಡೆಸಬೇಕು. ಆದರೆ ಇದೀಗ ಎರಡು ತಿಂಗಳಾದರೂ ಸಭೆ ನಡೆಸಿಲ್ಲ. ಸಾಮಾನ್ಯ ಸಭೆ ನಡೆಸದಿದ್ದರೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ನಗರ ಪಂಚಾಯಿತಿ ಆಡಳಿತವನ್ನು ಬರ್ಕಾಸ್ತು ಮಾಡಿ ಎಂದು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ನ.ಪಂ.ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ನಗರ ಪಂಚಾಯಿತಿ ಆಡಳಿತ ಅಧಿಕಾರಕ್ಕೆ ಬಂದು ಒಂದು ವರ್ಷ ಆದರೂ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಹೇಳಿದರು.

ಆಡಳಿತ ನಡೆಸಲು, ಶುದ್ಧ ಕುಡಿಯುವ ನೀರು ಕೊಡಲು ಆಗದಿದ್ದರೆ ಆಡಳಿತ ಪಕ್ಷದ ಸದಸ್ಯರು ರಾಜಿನಾಮೆ ನೀಡಿ, ವಿಪಕ್ಷ ಸದಸ್ಯರು ಕೂಡ ರಾಜಿನಾಮೆ ನೀಡಲು ಸಿದ್ಧರಿದ್ದೇವೆ. ಹೊಸತಾಗಿ ಚುನಾವಣೆ ಎದುರಿಸುವಾ ಎಂದು ಹೇಳಿದರು. ಬಿಜೆಪಿಯವರು ಜನಪರ ಕೆಲಸ ಮಾಡದೆ ರಾಜಕೀಯ ಮಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಕೊಡಲು ಕ್ರಮ ಕೈಗೊಳ್ಳದೆ ಪಕ್ಷ ಸಂಘಟನೆಗೆ ಒತ್ತು ನೀಡುತಿದೆ ಎಂದು ಹೇಳಿದರು. 

ನಗರ ಪಂಚಾಯತ್ ನಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಜನ ಸಾಮಾನ್ಯರು ಬೇಷತ್ತು ಹೋಗಿದ್ದಾರೆ. ಜನರ ಸೇವೆ ನೀಡಲು ಆಡಳಿತ ಪಕ್ಷಕ್ಕೆ ಆಗುತ್ತಿಲ್ಲ. ಆದುದರಿಂದ ನಗರ ಪಂಚಾಯಲ್ಲಿ ವಿಪಕ್ಷ ಸದಸ್ಯರು ಕುಳಿತು ಕೆಲಸ ಮಾಡಿಸುತ್ತೇವೆ. ಅದಕ್ಕಾಗಿ ನಗರ ಪಂಚಾಯಿತಿಯಲ್ಲಿ ಒಂದು ಪ್ರತ್ಯೇಕ ಕೊಠಡಿ ಕೇಳುತ್ತೇವೆ. ಅಲ್ಲಿ ಸರದಿಯಂತೆ ವಿಪಕ್ಷ ಸದಸ್ಯರು ಪ್ರತಿದಿನ ಕುಳಿತು ಜನರಿಗೆ ಆಗಬೇಕಾದ ಕೆಲಸಗಳನ್ನು ಮಾಡಿ ಕೊಡುತ್ತೇವೆ ಎಂದು ವೆಂಕಪ್ಪ ಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News