ಪಾಡ್ದಾನಗಳಿಗೆ ಸಾಂಸ್ಕೃತಿಕ ಪಠ್ಯದ ಸ್ವರೂಪ ಅಗತ್ಯ: ಡಾ.ಚಿನ್ನಪ್ಪ ಗೌಡ
ಉಡುಪಿ, ಅ.30: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಜಂಟಿ ಆಶ್ರಯದಲ್ಲಿ ತಾಳ್ತಜೆ ಕೇಶವ ಭಟ್ಟ 2020ನೇ ಸಾಲಿನ ಪ್ರಶಸ್ತಿಯನ್ನು ಡಾ.ಎಸ್.ಡಿ.ಶೆಟ್ಟಿ ಹಾಗೂ 2021ನೆ ಸಾಲಿನ ಪ್ರಶಸ್ತಿಯನ್ನು ಡಾ.ಪಾದೇಕಲ್ಲು ವಿಷ್ಣು ಭಟ್ ಅವರಿಗೆ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ವುಂಟಪದಲ್ಲಿ ಪ್ರದಾನ ಮಾಡಲಾಯಿತು.
'ಪಾಡ್ದಾನಗಳು- ವಿಶ್ಲೇಷಣೆಯ ಹೊಸ ನೆಲೆಗಳು' ವಿಷಯದ ಕುರಿತು ಉಪನ್ಯಾಸ ನೀಡಿದ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ, ಪಾಡ್ದಾನ ವಿಶೇಷ ಅಧ್ಯಯನಕ್ಕೆ ಒಳಗಾದ ಪ್ರಕಾರ ಆಗಿದೆ. ಪಾಡ್ದಾನಗಳನ್ನು ಸಂಗ್ರಹ ಪಠ್ಯ, ಸಾಹಿತ್ಯ ಪಠ್ಯ, ಜನಪದ ಪಠ್ಯ ಹಾಗೂ ಸಾಂಸ್ಕೃತಿಕ ಪಠ್ಯವಾಗಿ ನೋಡುವ ನಾಲ್ಕು ಹಂತಗಳಿವೆ. ಇದರಲ್ಲಿ ಇಂದು ಪಾಡ್ದಾನಗಳನ್ನು ಸಾಂಸ್ಕೃತಿಕ ಪಠ್ಯವಾಗಿ ನೋಡುವ ಅಗತ್ಯ ಹೆಚ್ಚು ಇದೆ ಎಂದರು.
ಸಾಂಸ್ಕೃತಿಕದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಸೇರಿದಂತೆ ಎಲ್ಲ ಆಯಾಮಗಳು ಇರುತ್ತವೆ. ಇದರಿಂದ ಪಾಡ್ದಾನಗಳ ಮೌಲ್ಯ ಹಾಗೂ ಮಹತ್ವ ವನ್ನು ಇನ್ನಷ್ಟು ಸೂಕ್ಷವಾಗಿ ನೋಡಲು ಸಾಧ್ಯವಾಗುತ್ತದೆ. ಪಾಡ್ದಾನಗಳನು ಸಾಹಿತ್ಯಿಕ ಪಠ್ಯ ಓದುವ ಬದಲು ಚಾರಿತ್ರಿಕ ಕಾಲಘಟ್ಟದ ಸಾಮಾಜಿಕ ವಿಮರ್ಶೆ ಯಾಗಿ ನೋಡಬೇಕಾಗಿದೆ. ಪಾಡ್ದಾನಗಳು ತುಳುನಾಡಿನ ಮಹಾಕಾವ್ಯ, ಪುರಾಣ ಎಂಬುದಾಗಿಯೂ ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಸಂಶೋಧಕ ಡಾ.ಎಸ್.ಡಿ.ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆ ಯಲ್ಲಿ ಜನಪದ, ಭೂತಾರಧಾನೆ, ಯಕ್ಷಗಾನ ಸೇರಿದಂತೆ ಹಸ್ತಪ್ರತಿ ಅಧ್ಯಯನಕ್ಕೆ ಉತ್ತಮ ಅವಕಾಶ ಇದೆ. ಆದರೂ ಇಲ್ಲಿನ ಸಂಶೋಧಕರು ನಿರ್ಲರ್ಕ್ಷ ವಹಿಸು ತ್ತಿರುವುದು ವಿಷಾಧನೀಯ. ಇಲ್ಲಿಗೆ ಸಿಗುವ ಹಸ್ತಪ್ರತಿ ಬೇರೆ ಎಲ್ಲೂ ಇಲ್ಲ. ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರುಗಳಲ್ಲಿ ಹಸ್ತಪ್ರತಿ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕಾ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರ ಪುರಾಣಕಥಾ ಚಿಂತನಾರತ್ನ ಕೃತಿಯನ್ನು ಬಿಡುಗಡೆಗೊಳಿಸಿದರು. ಪಾದೆಕಲ್ಲು ವಿಷ್ಣು ಭಟ್ ಕೃತಿ ಪರಿಚಯ ಮಾಡಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಡಾ.ತಾಳ್ತಜೆ ವಸಂತ ಕುಮಾರ್, ಟಿ.ಕೆ.ರಘುಪತಿ, ಹಿರಿಯ ಲೇಖಕ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎಸ್.ಆರ್. ಅಭಿನಂದನಾ ಭಾಷಣ ಮಾಡಿದರು.
ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಪಿಪಿಸಿ ಉಪನ್ಯಾಸಕ ಶಿವಕುಮಾರ್ ಅಳಗೋಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.