‘ಅವ್ಯಾನ್’ ಸಿಎ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟನೆ
ಮಣಿಪಾಲ, ಅ.30: ಜವಾಬ್ದಾರಿಯುತ ವೃತ್ತಿ ನಿಭಾಯಿಸುವ ವೈದ್ಯರು ಆರೋಗ್ಯ ನಿಭಾಯಿಸಿದರೆ ಲೆಕ್ಕಪರಿಶೋಧಕರು ವ್ಯಕ್ತಿ, ಸಮಾಜ, ದೇಶದ ಆರ್ಥಿಕ ಆರೋಗ್ಯಕ್ಕೆ ಪೂರಕವಾಗಿದ್ದಾರೆ. ಕರಾವಳಿ ಬುದ್ಧಿವಂತರ ಜಿಲ್ಲೆಯಾಗಿದ್ದು ಲೆಕ್ಕಪರಿಶೋಧಕರಿಗೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಉಡುಪಿ ಶಾಖೆಯ ವತಿಯಿಂದ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಅವ್ಯಾನ್ -2021’ ಸಿಎ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಜನಸಂಖ್ಯೆ ಶಾಪವಾಗದೆ ವರವಾಗುವ ನಿಟ್ಟಿನಲ್ಲಿ ಎಲ್ಲರೂ ವೃತ್ತಿಪರ ರಾದರೆ ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ಭವಿಷ್ಯ, ಅವಕಾಶವಿದೆ. ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಣ್ಮಕ್ಕಳ ಸಂಜೆ ಕಾಲೇಜು ತೆರೆಯುವ ಪ್ರಸ್ತಾಪ ಸರಕಾರಕ್ಕೆ ಸಲ್ಲಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೂತನ ನೀತಿಯು ಶೈಕ್ಷಣಿಕ ವ್ಯವಸ್ಥೆಯನ್ನೇ ಬದಲಾಯಿಸಿ ಯುವಜನರಿಗೆ ಭವಿಷ್ಯದ ಹೊಸ ದಿಕ್ಕು ತೋರಲಿದೆ ಎಂದರು.
ಸಿಕಾಸಾ ಅಧ್ಯಕ್ಷ ಸಿಎ ನರಸಿಂಹ ನಾಯಕ್, ಕಾರ್ಯದರ್ಶಿ ಸಿಎ ಪ್ರದೀಪ್ ಜೋಗಿ, ಐಸಿಎಐ ಸಿಐಆರ್‌ಸಿ ಉಡುಪಿ ಶಾಖೆ ಅಧ್ಯಕ್ಷೆ ಸಿಎ ಕವಿತಾ ಎಂ. ಪೈ, ಉಪಾಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ, ಅಮ್ಲಿನ್ ಜಿ. ಜೋಸೆಫ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಯೀಸಾ ತಸ್ಲೀಂ ವಂದಿಸಿದರು.