ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ನಾಗೇಶ್ ರಾವ್ ನಿಧನ
Update: 2021-10-30 19:35 IST
ಉಡುಪಿ, ಅ.30: ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ನಾಗೇಶ್ ರಾವ್ ಕತಾರ್ ದೋಹಾದಲ್ಲಿರುವ ತಮ್ಮ ನಿವಾಸದಲ್ಲಿ ಅ.28ರ ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ ಅನುರಾಧ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಸುಮಾರು ಮೂರು ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ನಾಗೇಶ್ ರಾವ್ ಅಲ್ಲಿನ ಔಷಧಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಮಾಜ ಸೇವೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ರಾವ್, ಕತಾರ್ ಕರ್ನಾಟಕ ಸಂಘದ ಉಗಮದ ದಿನದಿಂದಲೂ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಖಜಾಂಚಿ, ಕಾರ್ಯಾದರ್ಶಿ ಹಾಗು ಜನವರಿ 2019ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದರು.
ಸದಾ ಹಸನ್ಮುಖಿಯಾಗಿದ್ದ ಸರಳ, ಸೌಮ್ಯ ಸ್ವಭಾವ, ಮೃದು ವ್ಯಕ್ತಿತ್ವದ ನಾಗೇಶ್ ರಾವ್ ಅವರಿಗೆ ಕರ್ನಾಟಕ ಸಂಘದ ವತಿಯಿಂದ ಶೃದ್ದಾಂಜಲಿ ಸಭೆಯನ್ನು ಅ.31ರ ರವಿವಾರ ಸಂಜೆ 7:00ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.