'ಬ್ಲಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲಿಸಿ ಮಂಡಿಯೂರಿದ ದ.ಆಫ್ರಿಕಾದ ಕ್ವಿಂಟನ್ ಡಿಕಾಕ್

Update: 2021-10-30 15:22 GMT
photo:twitter

ದುಬೈ: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೂಪರ್ 12 ಪಂದ್ಯದಿಂದ ಹೊರಗುಳಿದಿರುವುದಕ್ಕಾಗಿ ತಂಡದ ಕ್ಷಮೆ ಯಾಚಿಸಿರುವ ದಕ್ಷಿಣ ಆಫ್ರಿಕ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್  ಕ್ವಿಂಟನ್ ಡಿ ಕಾಕ್ ಶ್ರೀಲಂಕಾ ವಿರುದ್ಧ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಬ್ಲಾಕ್ ಲೈವ್ಸ್ ಮ್ಯಾಟರ್ (ಬಿಎಲ್‌ಎಮ್)-ಕರಿಯ ವರ್ಣೀಯರ ಜೀವಗಳಿಗೂ ಬೆಲೆಯಿದೆ’ ಅಭಿಯಾನದ ಪರವಾಗಿ ತಂಡದ ಇತರ ಆಟಗಾರರ ಜೊತೆಗೆ ಮಂಡಿಯೂರಿದ್ದಾರೆ.

ಮಂಗಳವಾರ ದುಬೈಯಲ್ಲಿ ನಡೆದಿದ್ದ ವೆಸ್ಟ್‌ಇಂಡೀಸ್ ವಿರುದ್ಧದ ಗುಂಪು 1ರ ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕದ ಆಟಗಾರರು ಬ್ಲಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಬೇಕು ಎಂಬುದಾಗಿ ತಂಡದ ಆಡಳಿತವು ಸೂಚಿಸಿತ್ತು. ಬಳಿಕ, ಆ ಪಂದ್ಯದಿಂದ ಕ್ವಿಂಟನ್ ಡಿ ಕಾಕ್ ಹೊರಗುಳಿದಿದ್ದರು. ಮಂಡಿಯೂರುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಭಾವಿಸಲಾಗಿತ್ತು.

"ನಾನು ಮಂಡಿಯೂರುವುದರಿಂದ ಇತರರಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತಿದ್ದೇನೆ ಹಾಗೂ  ಇತರರ ಜೀವನವನ್ನು ಉತ್ತಮಗೊಳಿಸುತ್ತಿದ್ದೇನೆ ಎಂದಾದರೆ ಹಾಗೆ ಮಾಡಲು ನನಗೆ ಹೆಚ್ಚು ಸಂತೋಷವಾಗುತ್ತದೆ" ಎಂದು ಡಿಕಾಕ್ ಹೇಳಿದರು.

ಡಿಕಾಕ್ ಆಡುವ ಬಳಗಕ್ಕೆ ಸೇರುವುದರೊಂದಿಗೆ ದ. ಆಫ್ರಿಕಾ ತಂಡದಲ್ಲಿ  ಏಕೈಕ ಬದಲಾವಣೆ ಮಾಡಲಾಗಿತ್ತು. ಹೆನ್ರಿಕ್ ಕ್ಲಾಸೆನ್ ಅವರು ಹಿರಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಡಿಕಾಕ್ ಗೆ ದಾರಿ ಮಾಡಿಕೊಟ್ಟರು.

"ತಂಡವು ಒಂದೆರಡು ದಿನಗಳ ಹಿಂದೆ ಇದ್ದದ್ದಕ್ಕಿಂತ  ಈಗ ಉತ್ತಮವಾಗಿದೆ. ಕ್ವಿಂಟನ್ ಉತ್ತಮ ಸ್ಥಿತಿಯಲ್ಲಿದ್ದಾರೆ" ಎಂದು ಟಾಸ್ ವೇಳೆ ದ. ಆಫ್ರಿಕಾ ನಾಯಕ ಬವುಮಾ ಹೇಳಿದರು.

ಡಿಕಾಕ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನು ಕೊನೆಯ ನಿಮಿಷದಲ್ಲಿ ತಪ್ಪಿಸಿಕೊಂಡಿರುವುದು ದಕ್ಷಿಣ ಆಫ್ರಿಕಾ ಹಾಗೂ  ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿತು ಹಾಗೂ  ಮಾಜಿ ನಾಯಕ ಗುರುವಾರ  ನೀಡಿರುವ ಹೇಳಿಕೆಯಲ್ಲಿ 'ಕ್ಷಮಿಸಿ' ಎಂದು ಕೇಳಿಕೊಂಡಿದ್ದರು.

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಹೆಂಡ್ರಿಕ್ಸ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ಡಿಕಾಕ್ ಕೇವಲ 12 ರನ್ ಗಳಿಸಿ ಔಟಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News