ಜನತೆಯನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿದ ಮೋದಿ ಸರಕಾರ: ಸಚಿವ ಭಗವಂತ ಖೂಬಾ
ಬಂಟ್ವಾಳ: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಬಳಿಕ ದೇಶ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದ್ದು ದೇಶದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾ ಆತ್ಮನಿರ್ಭರರಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
‘ಆಝಾದಿ ಕಾ ಸುವರ್ಣ ಮಹೋತ್ಸವ’ದ ಪ್ರಯುಕ್ತ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್ ಗಳು, ನಬಾಡ್೯ ಮತ್ತು ಇತರೆ ಸಹಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಂಟವಾಳದ ಬಂಟರ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಾಲಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಸರಕಾರಗಳು ನಾಗರಿಕರ ಅವಶ್ಯಕತೆಗಳನ್ನು ಗುರುತಿಸುವಲ್ಲಿ ಜನರ ಸಹಭಾಗಿತ್ವ ಪಡೆಯುವಲ್ಲಿ ವಿಫಲವಾದ್ದರಿಂದ ಬ್ಯಾಂಕಿಂಗ್ ಕ್ಷೇತ್ರ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಅಲ್ಲದೆ ಕಾಂಗ್ರೆಸ್ ನವರು ಜಾತಿ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ದಲಿತರನ್ನು ಮುಖ್ಯವಾಹಿನಿಗೆ ಬರಲು ಅವಕಾಶ ನೀಡಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜದಲ್ಲಿ ಯೋಜನೆಗಳಿಂದ ವಂಚಿತರಾದವರಿಗೆ ಯಾವುದೇ ತಾರತಮ್ಯ ಮಾಡದೆ ನೆರವು ನೀಡಿದೆ ಎಂದರು.
ದೇಶದಲ್ಲಿ 12 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಲಾಗಿದ್ದರೆ ಸುಮಾರು 16 ಕೋಟಿ ರೈತರು ಯೋಜನೆಗಳ ಲಾಭ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,95,606 ಮಂದಿ ಮುದ್ರಾಯೋಜನೆ ಲಾಭ ಪಡೆದಿದ್ದು. ಬೀದಿ ವ್ಯಾಪಾರಿಗಳ ಸಹಿತ ಹಲವರಿಗೆ ಸಾಲ, ಸೌಲಭ್ಯಗಳು ದೊರಕಿವೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದರು.
ಅಭಿವೃದ್ಧಿ ಕೇವಲ ಮೂಲಭೂತ ಸೌಕರ್ಯಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಶಿಕ್ಷಣದ ಏಳಿಗೆ, ಆರ್ಥಿಕ ಏಳಿಗೆ ಮತ್ತು ಸಾಮಾಜಿಕ ಏಳಿಗೆಯೂ ಅಗತ್ಯವಾದುದು, ಆಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ, ಇದು ದೂರದೃಷ್ಟಿಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸಮಾಜಿಕ ಕ್ಷೇತ್ರದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಇವನ್ನೆಲ್ಲ ಮೆಟ್ಟಿ ನಿಂತು ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯಲ್ಲಿ ನಾವು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೆವೆ ಎಂದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಲಮೇಳ ಮೂಲಕ ಈ ಜಿಲ್ಲೆಯ ಜನರು ಬ್ಯಾಂಕಿಗೆ ಹೋಗಿ ಸಾಲ ಪಡೆಯಬಹುದು ಎಂದು ನಿರೂಪಿಸಿದವರು ಜನಾರ್ದನ ಪೂಜಾರಿ. ಡಿಜಿಟಲ್ ಇಂಡಿಯಾ, ಜನಧನ್ ಅಕೌಂಟ್ ಮೂಲಕ ನೇರವಾಗಿ ಫಲಾನುಭವಿಗೆ ದೊರಕುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದರು ಎಂದರು.
ದ. ಕ. ಜಿಲ್ಲೆಯಲ್ಲಿ 4 ಲಕ್ಷ ಜನರಲ್ಲಿ ಜನ್ ಧನ್ ಅಕೌಂಟ್ ಆಗಿದೆ ಎಂದು ಮಾಹಿತಿ ನೀಡಿದ ಅವರು, ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೂ ಮಾಡಲಾಗುತ್ತಿದೆ. ಹೀಗಾಗಿ ಸ್ಥಳೀಯ ಭಾಷೆ ಬಲ್ಲವರು ಪ್ರತಿಯೊಂದು ಬ್ರಾಂಚ್ ನಲ್ಲಿರುವಂತಾಗಬೇಕು ಎಂದರು.
ಕನ್ನಡ ಮತ್ತು ತುಳು ಮಾತನಾಡುವವರು ಕಡ್ಡಾಯವಾಗಿ ಒಂದೊಂದು ಬ್ಯಾಂಕ್ ಶಾಖೆಯಲ್ಲಿರಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಸೂಚಿಸಿದರು. ಸರಕಾರದ ಯೋಜನೆಯ ಬಗ್ಗೆ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ಕೊರತೆ ಕೆಲ ಶಾಖೆಗಳಲ್ಲಿದೆ. ಈ ನಿಟ್ಟಿನಲ್ಲಿ ಸರಿಯಾದ ನಿರ್ದೇಶನಗಳನ್ನು ಅವರಿಗೆ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ದೊರಕಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ನಳಿನ್ ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಿಕ್ಷಣ ಆರೋಗ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಜನಸಾಮಾನ್ಯರಿಗೆ ಅನುಕೂಲವಾಗಿಸಲು ಜನಾರ್ಧನ ಪೂಜಾರಿವರು ಸಾಲ ಮೇಳ ನಡೆಸಿದ್ದರು. ಇದೀಗ ಹೊಸ ಬಗೆಯಲ್ಲಿ ಸಾಲಸಂಪರ್ಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಳಿನ್ ಕುಮಾರ್ ಕಟೀಲು ಅವರು ಆಧುನಿಕ ಸಾಲ ಮೇಳದ ರುವಾರಿ ಎನ್ನಿಸಿದ್ದಾರೆ ಎಂದರು.
ಸಚಿವ ಎಸ್.ಅಂಗಾರ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ನೇಮಕಾತಿ ನೀಡುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ನವೋದಯ ಗುಂಪಿನ ಸದಸ್ಯೆಯರಿಗೆ ಮುಂದಿನ ಜನವರಿಗೆ ಸಮವಸ್ತ್ರ ವಿತರಿಸುವುದರ ಜತೆಗೆ ಹೀಗಿರುವ ಗುಂಪನ್ನು 40 ಸಾವಿರ ನವೋದಯ ಗುಂಪನ್ನು 80 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದರು.
ಶಾಸಕರಾದ ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ ವೈ., ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಜಿಪಂ ಸಿಇಒ ಡಾ. ಕುಮಾರ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದಿ.ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಅಲೆಮಾರಿ, ಆರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ನಬಾಡ್೯ ಡಿಡಿಎಂ ಸಂಗೀತಾ ಎಸ್.ಕರ್ತ, ವಿವಿಧ ಬ್ಯಾಂಕ್ ಅಧಿಕಾರಿಗಳಾದ ಯೋಗೀಶ್ ಆಚಾರ್ಯ, ಗಾಯತ್ರಿ, ರಾಜೇಶ್ ಗುಪ್ತಾ, ವಿನಯ ಭಟ್ ವಿ.ಜೆ., ಸೂರ್ಯ ನಾರಾಯಣ, ಅಮಿತ್ ಕುಮಾರ್, ಶ್ರೀಕಾಂತ್ ಕೆ. ದಾಮೋದರ, ಮಹೇಶ್, ಸಹಾಯಕ ಕಮೀಷನರ್ ಮದನ್ ಮೋಹನ್, ತಹಶೀಲ್ದಾರ್ ರಶ್ಮೀ ಎಸ್.ಆರ್. ಮೊದಲಾದವರು ಉಪಸ್ಥಿತರಿದ್ದರು.