ಪಾಕಿಸ್ತಾನ: ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ್ದ ವ್ಯಕ್ತಿಗೆ 5 ವರ್ಷದ ಜೈಲುಶಿಕ್ಷೆ
ಕರಾಚಿ, ಅ.30: ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾರ ರಾಜೀನಾಮೆಗೆ ಆಗ್ರಹಿಸಿದ್ದ ಪಾಕಿಸ್ತಾನದ ಸೇನೆಯ ನಿವೃತ್ತ ಅಧಿಕಾರಿಯ ಪುತ್ರ ಹಸನ್ ಅಸ್ಕಾರಿ ಅಪರಾಧಿ ಎಂದು ಘೋಷಿಸಿರುವ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ 5 ವರ್ಷದ ಜೈಲುಶಿಕ್ಷೆ ವಿಧಿಸಿದೆ.
ಜನರಲ್ ಬಾಜ್ವಾರ ಸೇವಾವಧಿಯನ್ನು ವಿಸ್ತರಿಸುವುದನ್ನು ಟೀಕಿಸಿ ಪತ್ರ ಬರೆದಿದ್ದ ಹಸನ್ ಅಸ್ಕಾರಿ ವಿರುದ್ಧ ದಾಖಲಿಸಿದ್ದ ದೇಶದ್ರೋಹದ ಆರೋಪ ಸಾಬೀತಾಗಿದೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ಇಸ್ಲಮಾಬಾದ್ ಹೈಕೋರ್ಟ್‌ನಲ್ಲಿ ನಡೆದಿದ್ದು ಬಳಿಕ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ವಿಚಾರಣೆ ಸಂದರ್ಭ ಬಿಗುಭದ್ರತೆಯ ಸಾಹಿವಾಲ್ ಜೈಲಿನಲ್ಲಿ ಬಂಧನದಲ್ಲಿದ್ದ ಪುತ್ರನನ್ನು ಭೇಟಿಯಾಗಲು ತೊಂದರೆಯಾಗುತ್ತಿದೆ ಎಂದು ಅಸ್ಕಾರಿಯ ತಂದೆ, ಪಾಕ್ ಸೇನೆಯ ನಿವೃತ್ತ ಮೇಜರ್ ಜನರಲ್ ಝಾಫರ್ ಮೆಹದಿ ಅಸ್ಕಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಓರ್ವ ಪೌರನನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬಹುದೇ ಎಂದು ಅಸ್ಕಾರಿಯ ವಕೀಲರು ವಾದ ಮಂಡಿಸಿದ್ದರು.