×
Ad

ಉ.ಕ ಜಿಲ್ಲಾ ಎಸ್.ಡಿ.ಪಿ.ಐ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ

Update: 2021-10-30 23:35 IST

ಭಟ್ಕಳ: ಎಸ್.ಡಿ.ಪಿ.ಐ ಪಕ್ಷದ ಉತ್ತರಕನ್ನಡ ಜಿಲ್ಲಾ ಪ್ರತಿನಿಧಿಗಳ ಸಭೆ ಇಲ್ಲಿನ ಸಿಟಿಹಾಲ್ ಸಭಾಂಗಣದಲ್ಲಿ ಶನಿವಾರ ನಡೆಯತು. 

ಈ ಸಭೆಯಲ್ಲಿ ಕರಾವಳಿ ಪ್ರದೇಶಕ್ಕೆ ತೌಫಿಖ್ ಬ್ಯಾರಿಯನ್ನು ಹಾಗೂ ಮಲೆನಾಡು ಪ್ರದೇಶಕ್ಕೆ ಸಿರ್ಸಿಯ ಆರಿಫ್ ರಝಾರನ್ನು ಜಿಲ್ಲಾಧ್ಯಕ್ಷರುಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಇಕ್ಬಾಲ್ ಬೆಳ್ಳಾರೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉ.ಕ ಜಿಲ್ಲೆಯಲ್ಲಿ 5 ಶಾಸಕರು ಹಾಗೂ ಓರ್ವ ಸಂಸದರನ್ನು ಬಿಜೆಪಿ ಪಕ್ಷವು ಹೊಂದಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಯಾವುದೇ ಗಮನ ಹರಿಸದ ಕೇವಲ ಮನ್ ಕಿ ಬಾತ್ ನಲ್ಲೇ ಕಾಲ ಕಳೆಯುತ್ತಿದ್ದಾರೆ. ಕೇವಲ ಹೇಳಿಕೆ ಮತ್ತು ಮಾತುಗಳಿಗೆ ಮಾತ್ರ ಸೀಮಿತವಾಗಿರುವ ಈ ಬಿಜೆಪಿಗರಿಂದ ಜಿಲ್ಲೆಯ ಅಭಿವೃದ್ಧಿ ಯಾವತ್ತಿಗೂ ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಎಸ್.ಡಿ.ಪಿ.ಐ ಒಂದು ಬೃಹತ್ ಪರ್ಯಾಯಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. 

ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಸಂಸದರು ಚುನಾವಣೆ ಕಳೆದು ಎರಡು ವರ್ಷಗಳಾದರೂ ಅದರ ಕುರಿತು ಚಕಾರ ಎತ್ತುತ್ತಿಲ್ಲ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಇಲ್ಲಿ ಅಭಿವೃದ್ದಿ ಆಗಬೇಕಾಗಿದೆ. ಆಡಳಿತ ಮಾಡುವ ಸರ್ಕಾರ ಅಭಿವೃದ್ಧಿ ಕುರಿತು ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದರು. 

ಈ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ತೌಫಿಖ್ ಬ್ಯಾರಿ, ಆರಿಫ್ ರಝಾ, ವಸೀಮ್ ಮನೆಗಾರ್, ರಾಜ್ಯ ಪ್ರತಿನಿಧಿ ಮಂಡಳಿ ಸದಸ್ಯ ಅಕ್ಬರ್ ಅಲಿ ಮುಂತಾದವರು ಉಪಸ್ಥಿತರಿದ್ದರು. 

ಎಸ್.ಡಿ. ಪಿ.ಐ ನೂತನ ಪದಾಧಿಕಾರಿಗಳ ವಿವರ: ಕರಾವಳಿ ಭಾಗದ ಜಿಲ್ಲಾಧ್ಯಕ್ಷರಾಗಿ ಭಟ್ಕಳದ ತೌಫಿಖ್ ಬ್ಯಾರಿ, ಶಮ್ಸ್ ನವೀದ್ (ಉಪಾಧ್ಯಕ್ಷ), ವಸೀಮ್ ಮನೇಗರ್ (ಪ್ರಧಾನ ಕಾರ್ಯದರ್ಶಿ), ಮುಖ್ತಾರ್ ಖಾಝಿ (ಕಾರ್ಯದರ್ಶಿ), ಅಬ್ದುಲ್ ಸತ್ತಾರ್ (ಖಜಾಂಚಿ), ಮನ್ಸೂರ್ ಖಾಝಿ (ಸದಸ್ಯ) ಆಸಿಫ್ ಕೋಟೆಬಾಗಲ್ (ಸದಸ್ಯರು)

ಮಲೆನಾಡು ವಿಭಾಗದ ನೂತನ ಪದಾಧಿಕಾರಿಗಳು: ಆರಿಫ್ ರಜಾ (ಅಧ್ಯಕ್ಷ), ಸುಭಾನ್ ಶೇಖ್ (ಉಪಾಧ್ಯಕ್ಷರು). ರಿಯಾಜ್ ಅಹ್ಮದ್ (ಪ್ರಧಾನ ಕಾರ್ಯದರ್ಶಿ), ಷರೀಫ್ ಶೇಖ್ (ಕಾರ್ಯದರ್ಶಿ), ಅಬ್ದುಲ್ ಎಂ ಹುಸೇನ್ (ಖಜಾಂಚಿ). ಆರಿಫ್ ಶೇಖ್ (ಸದಸ್ಯ), ಮುಜೀಬ್ ಶೇಖ್ (ಸದಸ್ಯರು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News