ರಾಮಮಂದಿರಕ್ಕೆ ದೇಣಿಗೆ ನೀಡದ್ದಕ್ಕೆ ಮುಖ್ಯಶಿಕ್ಷಕಿಗೆ ಶಿಕ್ಷೆ!

Update: 2021-10-31 04:35 GMT

ಹೊಸದಿಲ್ಲಿ, ಅ.31: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ದೇಣಿಗೆ ನೀಡದ ಕಾರಣಕ್ಕಾಗಿ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಆಪಾದಿಸಿ ಮುಖ್ಯ ಶಿಕ್ಷಕಿಯೊಬ್ಬರು ಸಲ್ಲಿಸಿದ ದಾವೆಯ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್, ಶಾಲಾಡಳಿತ ಮಂಡಳಿಗೆ ನೋಟಿಸ್ ನೀಡಿದೆ. ತಮಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದೂ ಮಹಿಳೆ ಆಪಾದಿಸಿದ್ದಾರೆ.

ಅಮಾನತು ಆದೇಶವನ್ನು ರದ್ದುಪಡಿಸಿ, ಉದ್ಯೋಗಕ್ಕೆ ವಾಪಸ್ ಕರೆಸಿಕೊಳ್ಳುವ ಜತೆಗೆ ಹಿಂದಿನ ಪೂರ್ಣ ವೇತನ ನೀಡಲು ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಶಿಕ್ಷಕಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ವಿನಾಕಾರಣ ತಮ್ಮನ್ನು ದಿಢೀರನೇ ಭಾಲ್‌ಸ್ವಾ ಶಾಲೆಗೆ ವರ್ಗಾಯಿಸಲಾಗಿದ್ದು, ಶಾಲೆಯಿಂದ ತಮಗೆ ಎಲ್ಲ ಡೈರಿಗಳನ್ನು ಪಡೆದುಕೊಳ್ಳಲು ಕೂಡಾ ಸಮಯಾವಕಾಶ ನೀಡಿಲ್ಲ ಎಂದು ದೂರಿದ್ದಾರೆ.

"ರಾಮಮಂದಿರಕ್ಕಾಗಿ 2021ರ ಫೆಬ್ರವರಿಯಲ್ಲಿ 70 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಸಂಗ್ರಹಿಸಲು ಅಥವಾ ದೇಣಿಗೆ ನೀಡಲು ಎಲ್ಲ ಸಿಬ್ಬಂದಿಗೆ ಪ್ರತಿವಾದಿ ಶಿಕ್ಷಣ ಸಂಸ್ಥೆಯಿಂದ ಗುರಿ ನೀಡಲಾಗಿತ್ತು. ಪೋಷಕರು ದೇಣಿಗೆ ನೀಡುವಂತೆ ವಿದ್ಯಾರ್ಥಿಗಳ ಮನವೊಲಿಸಲು ಸೂಚಿಸಲಾಗಿತ್ತು ಇಲ್ಲವೇ ಮಾರುಕಟ್ಟೆಗೆ ತೆರಳಿ ಅಂಗಡಿ ಮಾಲಕರಿಂದ ದೇಣಿಗೆ ಸಂಗ್ರಹಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಅರ್ಜಿದಾರ ಮಹಿಳೆ ಆಪಾದಿಸಿದ್ದಾರೆ.

ಅರ್ಜಿದಾರ ಶಿಕ್ಷಕಿ ಯಾವುದೇ ತರಗತಿಯ ಉಸ್ತುವಾರಿ ಹೊಂದಿದ ಶಿಕ್ಷಕಿಯಲ್ಲದ ಕಾರಣ ಹಾಗೂ ಸ್ವಂತವಾಗಿ ಅಷ್ಟೊಂದು ದೊಡ್ಡ ಮೊತ್ತದ ಕೊಡುಗೆ ನೀಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಶಿಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

"ಇದು ಪ್ರತಿ ವರ್ಷ ಸಮರ್ಪಣೆ ಹೆಸರಿನಲ್ಲಿ ಸಂಗ್ರಹಿಸಬೇಕಾದ 5ರಿಂದ 15 ಸಾವಿರ ರೂ.ವಲ್ಲದೇ ಹೆಚ್ಚುವರಿಯಾಗಿ ಸಂಗ್ರಹಿಸಬೇಕಾದ ದೇಣಿಗೆಯಾಗಿತ್ತು. ರಾಮಮಂದಿರಕ್ಕೆ 70 ಸಾವಿರ ರೂ. ಹಾಗೂ ವಾರ್ಷಿಕ ಸಮರ್ಪಣೆಗೆ 15 ಸಾವಿರ ರೂ. ನೀಡುವಂತೆ ಬಲವಂತಪಡಿಸಲಾಯಿತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ಕೇವಲ 2,100 ರೂಪಾಯಿಗಳನ್ನು ರಾಮಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದು, ವಾರ್ಷಿಕ ಸಮರ್ಪಣೆಗೆ ಹಣ ನೀಡಿರಲಿಲ್ಲ ಎಂದು ವಿವರಿಸಲಾಗಿದೆ.

ಅರ್ಜಿದಾರ ಶಿಕ್ಷಕಿಯ ಪತಿ 2016ರಲ್ಲಿ ಅಪಘಾತವೊಂದರಲ್ಲಿ ಕಣ್ಣು ಕಳೆದುಕೊಂಡಿದ್ದು, ಇತರ ಗಂಭೀರ ಗಾಯಗಳಾಗಿವೆ. ನರ ಸಮಸ್ಯೆಯೂ ಇರುವ ಕಾರಣದಿಂದ ಆರ್ಥಿಕವಾಗಿ ಕುಟುಂಬ ತೀವ್ರ ಸಂಕಷ್ಟದಲ್ಲಿದೆ ಎಂದು ವಕೀಲ ಖಗೇಶ್ ಝಾ ನ್ಯಾಯಾಲಯದಲ್ಲಿ ಹೇಳಿದರು. ಆದಾಗ್ಯೂ ಆರೆಸ್ಸೆಸ್ ಹಿನ್ನೆಲೆಯ ಸಮರ್ಥ ಶಿಕ್ಷಣ ಸಮಿತಿ ತಮ್ಮ ಕಕ್ಷಿದಾರರಿಗೆ ಕಿರುಕುಳ ನೀಡಿದೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News