ಸಿಪಿಎಂ ಮಂಗಳೂರು ನಗರ ಉತ್ತರ ಸಮ್ಮೇಳನ
ಮಂಗಳೂರು, ಅ.31: ಹಿಂದುತ್ವ, ಸರ್ವಾಧಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಅಭಿಪ್ರಾಯಿಸಿದ್ದಾರೆ
ಅವರು ಕೂಳೂರಿನಲ್ಲಿ ಜರುಗಿದ ಸಿಪಿಎಂ ಮಂಗಳೂರು ನಗರ ಉತ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಾಜಿ ಕಾರ್ಪೋರೇಟರ್ ಹಾಗೂ ಸಿಪಿಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ವಹಿಸಿದ್ದರು.
ಕಳೆದ ಹಲವು ವರ್ಷಗಳಿಂದ ದುಡಿಯುವ ವರ್ಗದ ಚಳವಳಿಗಾಗಿ ಅವಿಶ್ರಾಂತ ವಾಗಿ ಶ್ರಮಿಸಿದ ಪಕ್ಷದ ಹಿರಿಯ ಸದಸ್ಯರಾದ ತುಕಾರಾಮ ಕೊಂಚಾಡಿ, ನಾರಾಯಣ ಕೊಂಚಾಡಿ, ಸುಕುಮಾರ್ ಮಾಲೆಮಾರ್ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಪಕ್ಷದ ಹಿರಿಯ ಸದಸ್ಯರಾದ ನಾರಾಯಣ ಕೊಂಚಾಡಿ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಿಪಿಎಂ ಮಂಗಳೂರು ನಗರ ಉತ್ತರ ಸಮಿತಿ ನಾಯಕರಾದ ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ಬಿ.ಕೆ.ಇಮ್ತಿಯಾಝ್, ರವಿಚಂದ್ರ ಕೊಂಚಾಡಿ, ನವೀನ್ ಕೊಂಚಾಡಿ, ಸಮ್ಮೇಳನದ ಸ್ವಾಗತ ಸಮಿತಿ ಮುಖಂಡರಾದ ಅನಿಲ್ ಡಿಸೋಜ, ಮುಸ್ತಫ, ಶರೀಫ್ ಉಪಸ್ಥಿತರಿದ್ದರು.
ಅಹ್ಮದ್ ಬಶೀರ್ ಸ್ವಾಗತಿಸಿದರು. ಸಂತೋಷ್ ಡಿಸೋಜ ವಂದಿಸಿದರು.