×
Ad

ಉಡುಪಿ ಜಿಲ್ಲಾ ರಾಜ್ಯೋತ್ಸವ ಪರಿಷ್ಕೃತ ಪಟ್ಟಿ ಪ್ರಕಟ

Update: 2021-10-31 17:14 IST

ಉಡುಪಿ, ಅ.31: ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಯಕ್ಷಗಾನ ಕ್ಷೇತ್ರವನ್ನು ಕಡೆಗಣಿಸಿರುವುದಾಗಿ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಇಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪರಿಷ್ಕರಿಸಿ ಮತ್ತೆ ಪ್ರಕಟಿಸಿದೆ.

ಅ.30ರಂದು ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾದ 35 ಮಂದಿಯ ಪಟ್ಟಿಯಲ್ಲಿ ಯಕ್ಷಗಾನ ಹಾಗೂ ಕೃಷಿ ಕ್ಷೇತ್ರದಲ್ಲಿ ಯಾರೊಬ್ಬರನ್ನೂ ಪರಿಗಣಿಸಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರಿಂದ ಜಿಲ್ಲಾಡಳಿತ ತರಾತುರಿಯಲ್ಲಿ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಿದೆ.

ಈ ಹಿಂದಿನ ಪಟ್ಟಿಯಲ್ಲಿದ್ದ ಇಬ್ಬರನ್ನು ಕೈಬಿಟ್ಟು ಯಕ್ಷಗಾನ ಸಹಿತ ಎರಡು ಕ್ಷೇತ್ರಗಳಿಗೆ ಇಬ್ಬರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಒಟ್ಟು 35 ಮಂದಿಯ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ್ ಗಾಣಿಗ ಉಪ್ಪುಂದ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಮಣೂರು ಮಧುಸೂದನ್ ಬಾಯರಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಕೃಷಿಗೆ ಕ್ಷೇತ್ರದಲ್ಲಿ ಯಾರನ್ನು ಕೂಡ ಆಯ್ಕೆ ಮಾಡಿಲ್ಲ.

ಈ ಹಿಂದಿನ ಪಟ್ಟಿಯಲ್ಲಿದ್ದ ಯೋಗ ಕ್ಷೇತ್ರದ ಕೆ.ನರೇಂದ್ರ ಕಾಮತ್ ಪೆರ್ವಾಜೆ ಹಾಗೂ ಸಮಾಜ ಸೇವೆ ಕ್ಷೇತ್ರದ ನಾಗರಾಜ್ ಪುತ್ರನ್ ಕೋಟತಟ್ಟು ಅವರ ಹೆಸರನ್ನು ಕೈಬಿಡಲಾಗಿದೆ. ಮೊದಲ ಪಟ್ಟಿಯಲ್ಲಿದ್ದ ಮಹಾಬಲ ಸುವರ್ಣ ಹಾಗೂ ಪೂವಪ್ಪ ಪೂಜಾರಿ ಅವರಿಗೆ ದೈವರಾಧನೆ ಕ್ಷೇತ್ರವನ್ನು ಕೈಬಿಟ್ಟು ಸಂಕೀರ್ಣ ಕ್ಷೇತ್ರ ಎಂಬುದಾಗಿ ಬದಲಾಯಿಸಲಾಗಿದೆ. ಅದೇ ರೀತಿ ಕುಷ್ಟ ಕೊರಗ ಅವರಿಗೆ ಕಲೆಯ ಬದಲು ಕರಕುಶಲ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News