ಬಂಟಕಲ್ಲಿನಲ್ಲಿ ಹಳೆಕಾಲದ ಎಣ್ಣೆದೀಪದ ಬೀದಿ ದೀಪಸ್ತಂಭಕ್ಕೆ ಮರು ಚಾಲನೆ

Update: 2021-10-31 13:37 GMT

ಶಿರ್ವ, ಅ.31: ಹಳೆ ಕಾಲದಲ್ಲಿ ರಾತ್ರಿ ಪ್ರಯಾಣಿಕರ ಅನುಕೂಲಕ್ಕಾಗಿ ಆಯ ಕಟ್ಟಿನ ಸ್ಥಳಗಳಲ್ಲಿ ನಿರ್ಮಿಸುತ್ತಿದ್ದ ಎಣ್ಣೆದೀಪದ ಬೀದಿ ದೀಪಸ್ತಂಭಕ್ಕೆ ಮರು ಚಾಲನೆ ನೀಡುವ ಕಾರ್ಯಕ್ಕೆ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮತ್ತು ನಾಗರಿಕ ಸಮಿತಿ ಮುಂದಾಗಿದೆ.

ವಿದ್ಯುತ್ ದೀಪಗಳ ಕಲ್ಪನೆಯೇ ಇಲ್ಲದ ಹಿಂದಿನ ಕಾಲದಲ್ಲಿ ರಾಜ ರಸ್ತೆ ಬದಿ ಯಲ್ಲಿ ರಾತ್ರಿ ಪ್ರಯಾಣಿಕರ ಅನುಕೂಲಕ್ಕಾಗಿ ಆಯಕಟ್ಟಿನ ಸ್ಥಳಗಳಲ್ಲಿ ಶಿಲಾ ಸ್ತಂಭಗಳ ಮೇಲೆ ದೀಪದ ಗಾಜಿನ ಆವರಣ ಇರುವ ಬುಟ್ಟಿಗಳನ್ನು ಇಡಲಾಗುತ್ತಿತ್ತು. ರಾತ್ರಿ ಕಾಲದಲ್ಲಿ ಸಮೀಪದ ಮನೆಯವರು ಅದರೊಳಗೆ ಎಣ್ಣೆಯ ದೀಪವನ್ನು ಉರಿಸಿ ಇಡುವ ವ್ಯವಸ್ಥೆಯನ್ನು ಮಾಡುತ್ತಿದ್ದರು.

ಹಳ್ಳಿಯ ಜನರು ತೆಂಗಿನ ಸೋಗೆಯ ಒಣಗರಿಗಳಿಂದ ತಯಾರಿಸಿದ ತೂಟೆ(ಸೂಟೆ)ಯನ್ನು ಉರಿಸಿ ರಾತ್ರಿ ಸಂಚಾರ ಮಾಡು ತ್ತಿದ್ದು, ಆ ವೇಳೆ ಆಕಸ್ಮಿಕವಾಗಿ ಬೆಂಕಿ ಆರಿ ಹೋದಾಗ ಈ ದೀಪಸ್ತಂಭದಲ್ಲಿರುವ ಎಣ್ಣೆ ದೀಪದಿಂದ ಪುನ: ಬೆಂಕಿಯನ್ನು ಉರಿಸಿಕೊಳ್ಳುತ್ತಿದ್ದರು. ಸಾರ್ವಜನಿಕರಿಗೆ ಅನುಕೂಲವಾಗಿದ್ದ ಅಂತಹ ಒಂದು ಹಳೆಯ ಪಳೆಯುಳಿಕೆ ಬಂಟಕಲ್ಲು ಕೆಳಪೇಟೆಯ ಮಾಧವ ಕಾಮತ್‌ರವರ ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನ ಪಕ್ಕದಲ್ಲಿ ಕುರುಹುವಾಗಿ ಇಂದಿಗೂ ಉಳಿದು ಕೊಂಡಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೀಪಸ್ತಂಭದ ಅನತಿದೂರದ ಮಾಧವ ಕಾಮತ್ ರವರ ಪೂರ್ವಜರ ಜಮೀನಿನಲ್ಲಿ ಮಾನಿಪ್ಪಾಡಿ ಹೇರೂರಿನ ನಾರಾಯಣ ನಾಯಕ್ ಎಂಬವರು ಸಣ್ಣ ಗುಡಿಸಲಿನಲ್ಲಿ ಚಾ, ತಿಂಡಿ ಹೊಟೇಲ್ ನಡೆಸುತ್ತಿದ್ದರು. ಅವರು ಪ್ರತಿದಿನ ಕತ್ತಲಾಗುತ್ತಿದ್ದಂತೆ ರಸ್ತೆಪಕ್ಕದ ಈ ದೀಪಸ್ತಂಭಕ್ಕೆ ಎಣ್ಣೆದೀಪವನ್ನು ಉರಿಸಿಡುತ್ತಿದ್ದರು. ಅವರ ಕಾಲನಂತರ ಅವರ ಮಗ ಪುಂಡಲೀಕ ನಾಯಕ್ ಈ ಕಾಯಕ ಮುಂದುವರಿಸಿದರು. ಈ ಹಳ್ಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಬಂದ ತರುವಾಯ ಕ್ರಮೇಣ ಈ ದಾರಿದೀಪ ಅನಾಥವಾಗಿ ಕೇವಲ ಕಂಬ ಮಾತ್ರ ಉಳಿದುಕೊಂಡಿತು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ಸಂದರ್ಲ್ಲಿ ಶಿಲಾಸ್ತಂಭ ಮುರಿದು ಬಿದ್ದಿತ್ತು.

ಇದನ್ನು ಗಮನಿಸಿದ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮತ್ತು ನಾಗರಿಕ ಸಮಿತಿಯವರು ಮಾಧವ ಕಾಮತ್ ನೇತೃತ್ವದಲ್ಲಿ ಹಳೆಯ ಸವಿನೆನಪಿನ ಕುರುಹುವಾಗಿ ಅದೇ ಸ್ಥಳದಲ್ಲಿ ಈ ಎಣ್ಣೆದೀಪದ ಶಿಲಾಮಯ ದೀಪಸ್ತಂಭವನ್ನು ಪುಶ್ಚೇತನ ಗೊಳಿಸಿದ್ದು, ಕನ್ನಡ ರಾಜ್ಯೋತ್ಸವದ ದಿನ ಲೋಕರ್ಪಣೆ ಮಾಡುವ ಸಂಕಲ್ಪ ಮಾಡಿದ್ದಾರೆ. ನ.1ರಂದು ಸಂಜೆ 6ಗಂಟೆಗೆ ದೀಪ ಪ್ರಜ್ವಲನದ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News