ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಗೆ ಹೊರನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ
ಪುತ್ತೂರು : ಹಿರಿಯ ಪತ್ರಕರ್ತ, ಮುಂಬೈ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಈ ಬಾರಿಯ ಹೊರನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಳೆದ 25 ವರ್ಷಗಳಿಂದ ಮುಂಬೈಯಲ್ಲಿ ಕರ್ನಾಟಕ ಮಲ್ಲದ ಸಂಪಾದಕರಾಗಿ ಅವರು ಮಾಡುತ್ತಿದ್ದ ಕನ್ನಡ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ಅವರನ್ನು ಗೌರವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಬೈಲಿನ ಪಾಲೆತ್ತಾಡಿ ಮನೆಯ ತುಂಬು ಕುಟುಂಬ ದಲ್ಲಿ ಜನಿಸಿದ ಬಜತ್ತೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಡಿಗ್ರಿ ಪಡೆದಿದ್ದರು.
ಆನಂತರ ಮಂಗಳೂರಿನ ಕೊಣಾಜೆಯಲ್ಲಿ ಅವರು ಪೊಲಿಟಿಕಲ್ ಸಯನ್ಸ್ ಎಂ.ಎ ಪದವಿ ಪಡೆದಿದ್ದಾರೆ. ಮಂಗಳೂರಿನ ಹೊಸದಿಗಂತ ಕನ್ನಡ ದಿನಪತ್ರಿಕೆಯ ಮೂಲಕ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟ ಅವರು ನಂತರ ಮಂಗಳೂರು ಮಿತ್ರ ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಆನಂತರ ಮುಂಬೈಯಲ್ಲಿ ಮಂಗಳೂರು ಮಿತ್ರದ ಸಂಪಾದಕ ಎಂ.ಮಲ್ಲಿಕಾರ್ಜುನಯ್ಯ ಅವರು ಆರಂಭಿಸಿದ 'ಕರ್ನಾಟಕ ಮಲ್ಲ'ದಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಆನಂತರ ಅದರ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಂಬೈಯಲ್ಲಿ ಕನ್ನಡ ಭಾಷೆ ಸಂಸ್ಕೃತಿಯ ಉನ್ನತಿಗೆ ಕರ್ನಾಟಕ ಮಲ್ಲದ ಕೊಡುಗೆ ಅಪಾರವಾಗಿದೆ. ಇದೇ ರೀತಿಯಲ್ಲಿ ಕನ್ನಡ-ತುಳು ಸಂಘಟನೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ 2017ರಲ್ಲಿ ಮುಂಬೈ ಕನ್ನಡ ಹಾಗೂ ತುಳು ಸಂಘಟನೆಗಳ ಒಗ್ಗೂಡುವಿಕೆಯಲ್ಲಿ 'ಆಪ್ತಮಿತ್ರ' ಅಭಿನಂದನಾ ಗ್ರಂಥದ ಮೂಲಕ ಗೌರವಿಸಲಾಗಿತ್ತು. ಇದಲ್ಲದೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬೈಯ ವಿವಿಧ ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದ್ದರು.