ಜಮ್ಮು-ಕಾಶ್ಮೀರ:‌ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಇನ್ನೂ ಇಬ್ಬರ ಬಂಧನ

Update: 2021-10-31 15:07 GMT

ಶ್ರೀನಗರ,ಅ.31:ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಬಂಧಿಸಿದ್ದು,ಇದರೊಂದಿಗೆ ಕಳೆದ ಮೂರು ವಾರಗಳಲ್ಲಿ ಬಂಧಿತರ ಸಂಖ್ಯೆ 25ಕ್ಕೇರಿದೆ ಎಂದು ಎನ್ಐಎ ವಕ್ತಾರರು ರವಿವಾರ ಇಲ್ಲಿ ತಿಳಿಸಿದರು.

ಶನಿವಾರ ನಡೆಸಿದ ಶೋಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ಎನ್ಐಎ ಅಧಿಕಾರಿಗಳು ಶ್ರೀನಗರದ ಇಷ್ಫಾಕ್ ಅಹ್ಮದ್ ವಾನಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಸೋಪೋರ್ನ ಉಮರ್ ಭಟ್ ಎನ್ನುವವರನ್ನು ಬಂಧಿಸಿದರು.

ಬಂಧಿತ ಆರೋಪಿಗಳು ವಿವಿಧ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು ಮತ್ತು ಅಗತ್ಯ ಬೆಂಬಲಗಳನ್ನು ಒದಗಿಸುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವಕ್ತಾರರು ತಿಳಿಸಿದರು. 

ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೈಬಾ,ಜೈಷೆ ಮುಹಮ್ಮದ್,ಹಿಜ್ಬುಲ್ ಮುಜಾಹಿದೀನ್ ಮತ್ತು ಅಲ್ ಬದ್ರ್ ಹಾಗೂ ಅವುಗಳೊಂದಿಗೆ ಗುರುತಿಸಿಕೊಂಡಿರುವ ರಸಿಸ್ಟನ್ಸ್ ಫ್ರಂಟ್ ಮತ್ತು ಪೀಪಲ್ ಅಗೇನ್ಸ್ಟ್ ಫ್ಯಾಸಿಸ್ಟ್ ಫೋರ್ಸ್ಸ್ ಗಳಂತಹ ಗುಂಪುಗಳ ಉಗ್ರರಿಂದ ಜಮ್ಮು-ಕಾಶ್ಮೀರದಲ್ಲಿ ಹಾಗೂ ಇತರ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ದಳಿಗಳನ್ನು ನಡೆಸಲು ಸಂಚಿಗೆ ಸಂಬಂಧಿಸಿದಂತೆ ಎನ್ಐಎ ಅ.10ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಮೂರು ದಿನಗಳ ಬಳಿಕ ಕಾಶ್ಮೀರ ಕಣಿವೆಯಲ್ಲಿನ 18 ಸ್ಥಳಗಳ ಮೇಲೆ ದಾಳಿ ನಡೆಸಿ ಒಂಭತ್ತು ಜನರನ್ನು ಬಂಧಿಸಿತ್ತು.

ವಿವಿಧೆಡೆ ದಾಳಿ ಕಾರ್ಯಾಚರಣೆಗಳಲ್ಲಿ ಅ.20ರಂದು ನಾಲ್ವರನ್ನು ಮತ್ತು ಅ.22ರಂದು ಇನ್ನೂ ಎಂಟು ಜನರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News