ಅಮೆರಿಕ ಅಧ್ಯಕ್ಷ ಬೈಡೆನ್ ರನ್ನು ಭೇಟಿಯಾದ ಟರ್ಕಿ ಅಧ್ಯಕ್ಷ ಎರ್ದೋಗನ್

Update: 2021-10-31 16:11 GMT
photo:twitter/@DailySabah
 

ರೋಮ್, ಅ.31: ಇಟಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ರವಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ಟರ್ಕಿ ಅಧ್ಯಕ್ಷ ರಿಸೆಪ್ ಎರ್ದೋಗನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 ಅಮೆರಿಕದಿಂದ ಎಫ್-16 ಯುದ್ಧವಿಮಾನಗಳಿಗೆ ಟರ್ಕಿ ಬೇಡಿಕೆ ಇರಿಸಿದ್ದು ಈ ಬಗ್ಗೆ ಎರ್ದೋಗನ್ ಪ್ರಸ್ತಾವಿಸಲಿದ್ದಾರೆ ಎಂದು ಟರ್ಕಿಯ ಅಧಿಕಾರಿಗಳು ಹೇಳಿದ್ದಾರೆ. ಟರ್ಕಿಯು ರಶ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸಿದ್ದರಿಂದ ಆ ದೇಶಕ್ಕೆ ಎಫ್-16 ಯುದ್ಧವಿಮಾನ ಪೂರೈಸಬಾರದು ಎಂದು ಅಮೆರಿಕದ ಸಂಸದರು ಪಟ್ಟುಹಿಡಿದಿರುವುದರಿಂದ ಟರ್ಕಿಗೆ ಹಿನ್ನಡೆಯಾಗಿದೆ.

ಮಾನವಹಕ್ಕು ಹೋರಾಟಗಾರರ ವಿರುದ್ಧ ಟರ್ಕಿ ಕೈಗೊಂಡಿರುವ ಕ್ರಮದ ಬಗ್ಗೆ ಅಸಮಾಧಾನ ಹೊಂದಿರುವ ಬೈಡನ್, ಇಂತಹ ತೀವ್ರ ಕ್ರಮಗಳು ಅಮೆರಿಕ-ಟರ್ಕಿ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಉಭಯ ಮುಖಂಡರು ಮಾತುಕತೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ ಫೋಟೋಗೆ ಫೋಸ್ ನೀಡಿದರು. ಅಮೆರಿಕವು ಟರ್ಕಿಗೆ ಎಫ್-16 ಯುದ್ಧವಿಮಾನ ಒದಗಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡೆನ್, ಉತ್ತಮ ಮಾತುಕತೆ ನಡೆಸಲು ಇಬ್ಬರೂ ಯೋಚಿಸಿದ್ದೇವೆ ಎಂದರು.

ಟರ್ಕಿಯಲ್ಲಿ ಬಂಧನದಲ್ಲಿರುವ ಹೋರಾಟಗಾರ ಒಸ್ಮಾನ್ ಕವಾಲರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದ ಅಮೆರಿಕ ಹಾಗೂ ಇತರ ವಿದೇಶಿ ರಾಯಭಾರಿಗಳನ್ನು ಟರ್ಕಿಯಿಂದ ಹೊರಗಟ್ಟುವುದಾಗಿ ಎರ್ದೋಗನ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬಳಿಕ ತಮ್ಮ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News