ತೈವಾನ್ ಬಗ್ಗೆ ಏಕಪಕ್ಷೀಯ ಕ್ರಮದ ವಿರುದ್ಧ ಚೀನಾಕ್ಕೆ ಅಮೆರಿಕ ಎಚ್ಚರಿಕೆ‌

Update: 2021-10-31 16:35 GMT

ರೋಮ್, ಅ.31: ತೈವಾನ್ ಜಲಸಂಧಿಯುದ್ದಕ್ಕೂ ಉದ್ವಿಗ್ನತೆ ಹೆಚ್ಚಿಸುವ ಚೀನಾದ ಯಾವುದೇ ಕ್ರಮವನ್ನು ಅಮೆರಿಕ ವಿರೋಧಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಟಲಿಯಲ್ಲಿ ನಡೆಯುವ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ರವಿವಾರ ಚೀನಾದ ವಿದೇಶ ಸಚಿವ ವಾಂಗ್ ಯಿ ಜತೆ ಸುಮಾರು 1 ಗಂಟೆ ಮಾತುಕತೆ ನಡೆಸಿದ ಬ್ಲಿಂಕೆನ್, ತೈವಾನ್‌ನ ಯಥಾಸ್ಥಿತಿಯನ್ನು ಚೀನಾ ಏಕಪಕ್ಷೀಯವಾಗಿ ಬದಲಾಯಿಸುವುದಕ್ಕೆ ಅಮೆರಿಕದ ವಿರೋಧವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ . ಇದೇ ವೇಳೆ ತೈವಾನ್ ವಿಷಯದಲ್ಲಿ ‘ಒಂದು ಚೀನಾ’ ಕಾರ್ಯನೀತಿ ಬದಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದಾ್ದರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತೈವಾನ್‌ನ ವಾಯುಕ್ಷೇತ್ರದಲ್ಲಿ ಚೀನಾ ಯುದ್ಧವಿಮಾನಗಳು ಹಲವು ಬಾರಿ ಹಾರಾಟ ನಡೆಸಿದ್ದು ಚೀನಾದ ಕಿರುಕುಳ ಹೆಚ್ಚುತ್ತಿದೆ ಎಂದು ತೈವಾನ್ ಹೇಳಿತ್ತು. ತೈವಾನ್ ದ್ವೀಪವು ತನ್ನ ಭೂವ್ಯಾಪ್ತಿಯಲ್ಲಿದೆ ಮತ್ತು ತೈವಾನ್‌ನ ವ್ಯವಹಾರದಲ್ಲಿ ವಿದೇಶಿ ಹಸ್ತಕ್ಷೇಪವು ತನ್ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪಕ್ಕೆ ಸಮವಾಗಿದೆ ಎಂದು ಚೀನಾ ಎಚ್ಚರಿಸಿತ್ತು.

ವಿಶ್ವದ 2 ಪ್ರಮುಖ ಆರ್ಥಿಕ ಶಕ್ತಿಗಳ ಮಧ್ಯೆ ಇರುವ ತೀವ್ರ ಪೈಪೋಟಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಯಾವುದೇ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸುವುದಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ತೈವಾನ್‌ನೊಂದಿಗೆ ಯಾವುದೇ ಅಧಿಕೃತ ಸಂಬಂಧ ಹೊಂದಿರದಿದ್ದರೂ ಅಮೆರಿಕವು ತೈವಾನ್‌ಗೆ ನಿರಂತರ ಬೆಂಬಲ ನೀಡುತ್ತಿರುವ, ಶಸ್ತ್ರಾಸ್ತ್ರ ಪೂರೈಸುತ್ತಿರುವ ಪ್ರಮುಖ ರಾಷ್ಟ್ರವಾಗಿದೆ. ತೈವಾನ್‌ನ ರಕ್ಷಣೆಗೆ ಶಸ್ತ್ರಾಸ್ತ್ರ ಒದಗಿಸುತ್ತಿರುವುದಾಗಿ ಅಮೆರಿಕ ಪ್ರತಿಪಾದಿಸುತ್ತಿದೆ. ಚೀನಾ ಸೇನೆ ಒಂದು ವೇಳೆ ತೈವಾನ್‌ನ ಮೇಲೆ ದಾಳಿ ನಡೆಸಿದರೆ ಮಧ್ಯಪ್ರವೇಶಿಸಬೇಕೇ ಎಂಬ ಬಗ್ಗೆ ಅಮೆರಿಕದ ಸಂದಿಗ್ಧತೆಯಲ್ಲಿದೆ. ಅಗತ್ಯಬಿದ್ದರೆ ತೈವಾನ್‌ನ ರಕ್ಷಣೆಗೆ ಅಮೆರಿಕ ಧಾವಿಸಲಿದೆ ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಬೈಡನ್ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News