ಸುಳ್ಯದಲ್ಲಿ ಭಾರೀ ಮಳೆ: ಆತಂಕ ಸೃಷ್ಟಿಸಿದ ಸಿಡಿಲಿನ ಅಬ್ಬರ
Update: 2021-10-31 22:23 IST
ಸುಳ್ಯ: ನಗರದಲ್ಲಿ ರವಿವಾರ ಸಂಜೆ ಭಾರೀ ಮಳೆಯಾಗಿದ್ದು, ಸಿಡಿಲು ಮತ್ತು ಗುಡುಗಿನ ಅಬ್ಬರ ಆತಂಕ ಸೃಷ್ಠಿಸಿತ್ತು.
ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಭಾರೀ ಮಳೆಯಾಗಿದೆ. ಕಿವಿಗಪ್ಪಳಿಸುವ ಗುಡುಗು ಮತ್ತು ಸಿಡಿಲು ಭಾರೀ ಆತಂಕ ಸೃಷ್ಠಿಸಿದೆ. ನಗರ ಮಧ್ಯದಲ್ಲಿ ಸಿಡಿಲು ಅಪ್ಪಳಿಸಿ ಬೆಂಕಿಯ ಕಿಡಿ ಹರಿದಿದೆ.
ಸುಳ್ಯ ನಗರದ ಹೃದಯ ಭಾಗದ ಕಟ್ಟೆಕ್ಕಾರ್ ಜಂಕ್ಷನ್ ಬಳಿಯಲ್ಲಿ ಉಂಟಾದ ಸಿಡಿಲಿನ ಅಬ್ಬರದ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅದರ ವೀಡಿಯೊ ವೈರಲ್ ಆಗುತ್ತಿದೆ. ಸಿಡಿಲ ಅಬ್ಬರಕ್ಕೆ ಬೆಂಕಿಯ ಕಿಡಿ ಉಂಟಾದ ವೀಡಿಯೊ ವ್ಯಾಪಕವಾಗಿ ಹರಿದಾಡುತಿದೆ.
ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಸುಳ್ಯ ನಗರ, ಕಲ್ಮಡ್ಕ, ಎಣ್ಮೂರು, ಬಳ್ಪ ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ.