×
Ad

ಉಡುಪಿ: ಸೋಲಾರ್ ಸಿಸ್ಟಮ್, ದೀಪದ ಬತ್ತಿ ತಯಾರಿಸುವ ಯಂತ್ರ ಕೊಡುಗೆ

Update: 2021-11-01 17:41 IST

ಉಡುಪಿ, ನ.1: ರೋಟರಿ ಕ್ಲಬ್ ಅಂಬಲಪಾಡಿ ವತಿಯಿಂದ ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ಸೋಲಾರ್ ಲೈಟಿಂಗ್ ಸಿಸ್ಟಮ್ ಹಾಗೂ ದೀಪದ ಬತ್ತಿ ತಯಾರಿಸುವ ಯಂತ್ರವನ್ನು ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಗೆ ಇತ್ತೀಚೆಗೆ ಕೊಡುಗೆಯಾಗಿ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸೆಲ್ಕೊ ಇಂಡಿಯಾದ ಡಿಜಿಎಂ ಗುರು ಪ್ರಸಾದ್ ಶೆಟ್ಟಿ ಮಾತನಾಡಿ, ಸೌರಶಕ್ತಿಯಿಂದ ಕೇವಲ ಬೆಳಕು ನೀಡುವುದು ಮಾತ್ರವಲ್ಲ, ಅದರೊಂದಿಗೆ ಬಡತನ ನಿರ್ಮೂಲನೆ ಮಾಡುವಂತಹ ಮಹತ್ತರ ಕಾರ್ಯವನ್ನು ಮಾಡುತ್ತಿದ್ದೇವೆ. ಈಗಾಗಲೇ ಶಾಲೆಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರವಿದ್ಯುತ್ ಆಳವಡಿಸಲಾಗಿದೆ. ಮುಂದೆ ಸೆಲ್ಕೊದಿಂದ ದೇಶದ 10 ಜಿಲ್ಲೆಗಳ 1700 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪೂರ್ಣ ಸೋಲಾರ್ ವಿದ್ಯುತ್ ಆಗಿ ಮಾಡಲಾಗುವುದು. 2030ರ ವೇಳೆಗೆ 25000 ಕೇಂದ್ರವನ್ನು ಸೋಲಾರ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ರೋಟರಿ ವಲಯ -3ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್, ವಲಯ ಲೆಫ್ಟಿನೆಂಟ್ ಬ್ರಾನ್ ಡಿಸೋಜ, ಸಿಎಸ್‌ಐ ಉಡುಪಿ ಪ್ರದೇಶ ಕೌನ್ಸಿಲ್‌ನ ಚೇಯರ್‌ಮೆನ್ ರೆ.ಐವನ್ ಡಿ.ಸೋನ್ಸ್, ಉಡುಪಿ ಸಿಎಸ್‌ಐ ಚರ್ಚ್‌ನ ಧರ್ಮಗುರು ರೆ.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಅಂಬಲಪಾಡಿ ರೋಟರಿ ಅಧ್ಯಕ್ಷ ಮಹೇಂದ್ರ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಎಲ್. ವಂದಿಸಿದರು. ಖಲೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News