×
Ad

ಬೆಲೆ ಏರಿಕೆ ತಡೆಗೆ ಪರ್ಯಾಯ ನೀತಿಗಳು ಅಗತ್ಯ: ಬಾಲಕೃಷ್ಣ ಶೆಟ್ಟಿ

Update: 2021-11-01 19:47 IST

ಬೈಂದೂರು, ನ.1: ಕೇಂದ್ರ ಸರಕಾರದ ನೀತಿಗಳಿಂದಾಗಿ ದಿನೇ ದಿನೇ ಬೆಲೆ ಏರಿಕೆ ತೀವ್ರವಾಗುತ್ತಿದೆ. ಬೆಲೆ ಏರಿಕೆ ತಡೆಗಟ್ಟಲು ಪರ್ಯಾಯ ನೀತಿಗಳು ಅಗತ್ಯವಾಗಿವೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಗುಲ್ವಾಡಿ ಪ್ರಭಾಕಿರಣ ಟೈಲ್ಸ್ ಕಾರ್ಖಾನೆ ಆವರಣದಲ್ಲಿ ಕಾಂ.ವಿಠಲ ಪೂಜಾರಿ ವೇದಿಕೆಯ ಕಾಂ.ಗೋವಿಂದ ಶೆಟ್ಟಿಗಾರ್ ಸಭಾಂಗಣದಲ್ಲಿ ಇಂದು ನಡೆದ ಬೈಂದೂರು ವಲಯ ಮೂರನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜನರಿಗೆ ಲಸಿಕೆ ಕೊಡಲು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಅನಿವಾರ್ಯ ಎಂದು ಜನರನ್ನು ನಂಬಿಸಲಾಗುತ್ತಿದೆ. ಆದರೆ ಬಹುತೇಕ ತೈಲ ಕಂಪೆನಿಗಳು ಇಂದು ಖಾಸಗಿ ಒಡೆತನದಲ್ಲಿದ್ದು ಆ ಕಂಪೆನಿಗಳ ಲಾಭ ಹೆಚ್ಚಿಸಲು ಸರಕಾರ ಪ್ರಯತ್ನಿಸುತ್ತಿದೆ. ಅಡುಗೆ ಅನಿಲ ಸೇರಿದಂತೆ ಎಲ್ಲಾ ಆಹಾರ ವಸ್ತುಗಳ ಬೆಲೆ ಏರಿಕೆ ವಿರುದ್ಧ ಈ ಸಮ್ಮೇಳನವು ಮುಂದಿನ ದಿನದಲ್ಲಿ ತೀವ್ರ ಹೋರಾಟ ನಡೆಸಲು ನಿರ್ಣಯಿಸಬೇಕೆಂದು ಅವರು ಕರೆ ನೀಡಿದರು.

ಕೇಂದ್ರ ಸರಕಾರ ಅನುಸರಿಸುತ್ತಿರುವ ಕೆಟ್ಟ ಆರ್ಥಿಕ ನೀತಿಯಿಂದ ದೇಶದಲ್ಲಿ 70 ಲಕ್ಷ ಕಾರ್ಖಾನೆಗಳು ಮುಚ್ಚಿವೆ. ಇದರಿಂದ ಕೋಟ್ಯಾಂತರ ಉದ್ಯೋಗಗಳು ನಷ್ಟವಾಗಿವೆ. ನಮ್ಮ ಸಂಘಟನೆಗಳು ಇಂತಹ ಕಾರ್ಖಾನೆಗಳನ್ನು ಉಳಿಸಲು ಪರ್ಯಾಯ ಆರ್ಥಿಕ ನೀತಿಗಳಿಗಾಗಿ ಹೋರಾಟ ನಡೆಸುತ್ತಿದ್ದರು. ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ದೂರಿದರು.

ಅಧ್ಯಕ್ಷತೆ ಜಿ.ಡಿ.ಪಂಜು ವಹಿಸಿದ್ದರು. ಧ್ವಜಾರೋಹಣವನ್ನು ಪಕ್ಷದ ಹಿರಿಯ ಸದಸ್ಯ ಜಿ.ಬಿ.ಮುಹಮ್ಮದ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಿಪಿಎಂ ಪಕ್ಷದ ರಾಜ್ಯ ಮುಖಂಡ ಕೆ.ಶಂಕರ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ನರಸಿಂಹ, ಮಹಾಬಲ ವಡೇರಹೋಬಳಿ ಮಾತನಾಡಿದರು.

ಪ್ರತಿನಿಧಿ ಅಧಿವೇಶನವನ್ನು ವೆಂಕಟೇಶ್ ಕೋಣಿ, ಶೀಲಾವತಿ, ಸಂತೋಷ ಹೆಮ್ಮಾಡಿ ನಡೆಸಿಕೊಟ್ಟರು. ಶ್ರದ್ಧಾಂಜಲಿ ಠರಾವು ಮನೋರಮ ಭಂಡಾರಿ ಮಂಡಿಸಿದರು. ಪಕ್ಷದ ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಕರಡು ವರದಿ ಮಂಡಿಸಿದರು. ರಮೇಶ್ ಗುಲ್ವಾಡಿ ವಂದಿಸಿದರು.

ಬೆಲೆ ಏರಿಕೆ ವಿರೋಧಿಸಿ, ರೈತ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ, ಸೇಪಾಪುರದಲ್ಲಿ ಎಲ್ಲಾ ರೈಲುಗಳು ನಿಲುಗಡೆಗೆ ಆಗ್ರಹಿಸಿ, ಕರಾವಳಿ ನಿಯಂತ್ರಣ ವಲಯ ಕಠಿಣ ನಿಯಮಾವಳಿ ಸಡಿಲಗೊಳಿಸಲು, ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿ, ಸೌಕೂರು ಏತ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿ ಸಲು, ಗಂಗೊಳ್ಳಿ ಕೋಡಿ ಸೇತುವೆ ಸೇರಿದಂತೆ ಮೊದಲಾದ ನಿರ್ಣಯಗಳನ್ನು ಸಮ್ಮೇಳನ ಕೈಗೊಂಡಿತು. ನೂತನ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ ಮರು ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News