×
Ad

ಮನಪಾ: ಆಸ್ತಿ ತೆರಿಗೆ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗೆ ಚಾಲನೆ

Update: 2021-11-01 20:22 IST

ಮಂಗಳೂರು, ನ.1: ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಮತ್ತು ಆಸ್ತಿಗಳ ಹಾಗೂ ಪಾವತಿಗಳ ವಿವರ ತಿಳಿಯಲು ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸೋಮವಾರ ಚಾಲನೆ ನೀಡಿದರು.

ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪಾಲಿಕೆ ವ್ಯಾಪ್ತಿಯಲ್ಲಿ 2008ರ ಎ.1ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಈವರೆಗೆ ತೆರಿಗೆದಾರರು ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬೇಕಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದ್ದು, ಆನ್‌ಲೈನ್ ಮುಖೇನ ಬಳಸಿಕೊಳ್ಳಲು ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದರು.

ಇದರಿಂದ ಸಾರ್ವಜನಿಕ ಮತ್ತು ಕಚೇರಿಯ ಬಹುತೇಕ ಸಮಯದ ಉಳಿತಾಯವಾಗಲಿದ್ದು, ಇದು ಜನಸ್ನೇಹಿ ತಂತ್ರಾಂಶವಾಗ ಲಿದೆ. ನ. 2ರಿಂದ ಆನ್‌ಲೈನ್ ವ್ಯವಸ್ಥೆ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯ ಪೂರ್ಣ ಮಾಹಿತಿ ಅಂದರೆ ಈ ಹಿಂದಿನ ಸಾಲುಗಳಲ್ಲಿ ಕಟ್ಟಿರುವ ಮತ್ತು ಮುಂದೆ ಕಟ್ಟಬೇಕಿರುವ ಮೊತ್ತಗಳ ಪೂರ್ಣ ಮಾಹಿತಿ ಪಡೆಯಲಿದ್ದು, ಬಾಕಿ ಇರುವ ಮೊತ್ತ ಪಾವತಿಸಲು ಅನುಕೂಲವಾಗಲಿದೆ. ಮನಪಾ ವ್ಯಾಪ್ತಿಯ ಎಲ್ಲಾ ಆಸ್ತಿಗಳು ಈ ತಂತ್ರಾಂಶದಲ್ಲಿ ಅಪ್‌ಡೇಟ್ ಆಗಿರುವುದರಿಂದ ವಾಸ್ತವ್ಯ ಕಟ್ಟಡ, ವಾಣಿಜ್ಯ ಕಟ್ಟಡಗಳು ಮತ್ತು ವಾಣಿಜ್ಯೇತರ ಕೈಗಾರಿಕಾ ಕಟ್ಟಡಗಳು ಸೇರಿದಂತೆ ವಿವಿಧ ವರ್ಗೀಕರಣದ ಆಸ್ತಿ ಅಥವಾ ಕಟ್ಟಡಗಳ ಸಂಪೂರ್ಣ ಮಾಹಿತಿ ಪಡೆಯಲು ಬೇಕಾದ ವ್ಯವಸ್ಥೆ ಈ ಆನ್‌ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಆಸ್ತಿ ತೆರಿಗೆಗೆ ಸಂಬಂಧಿಸಿ ಪಾಲಿಕೆಯ ವಾರ್ಡುವಾರು ಕಟ್ಟಡ ಸಂಖ್ಯೆಗಳಿಗೆ ಅನುಗುಣವಾಗಿ ಬಾಕಿ ಇರುವ ತೆರಿಗೆ ಪಾವತಿಸಬೇಕಾದ ಮಾಹಿತಿ, ಕಟ್ಟಲು ಬಾಕಿ ಇರುವ ಮೊತ್ತದ ಕುರಿತು ಪೂರ್ಣ ಮಾಹಿತಿ ಲಭ್ಯವಿದೆ. ಲೆಕ್ಕಾಚಾರದಲ್ಲಿ ಯಾವುದೇ ಲೋಪ ಬಾರದಂತೆ ಅನುಕೂಲ ಮಾಡಲಾಗಿದೆ, ಪ್ರಾಪರ್ಟಿ ಸರ್ವೆ ಕೂಡಾ ಶೀಘ್ರ ಆರಂಭವಾಗಲಿದೆ ಎಂದು ಮೇಯರ್ ವಿವರಿಸಿದರು.

ಆನ್‌ಲೈನ್ ಪಾವತಿ ಅತಿ ಸರಳ ಆನ್‌ಲೈನ್ ಆಸ್ತಿ ತೆರಿಗೆ ಮಾಡುವಾಗ www.mccpropertytax.in ಲಿಂಕ್‌ಗೆ ಕ್ಲಿಕ್ ಮಾಡಬೇಕು. ಆಗ ತೆರೆಯುವ ಪುಟದಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ದಾಖಲಿಸಿ, ಬಳಿಕ ನಿಮ್ಮ ಆಸ್ತಿಯು ಭೂಪರಿವರ್ತನೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಭೂ ಪರಿವರ್ತನೆ ಆದಲ್ಲಿ ರಸ್ತೆ ವಿಸ್ತೀರ್ಣಕ್ಕೆ ಮಾಡಿರುವ ದಾನ ಪತ್ರದ ಬಗ್ಗೆ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಬೇಕು. ಕಟ್ಟಡ ಸಂಖ್ಯೆ, ಖಾತಾ ಸಂಖ್ಯೆ, ಪ್ರಾಪರ್ಟಿ ಐಡಿ (ಪಿಐಡಿ), ಆಸ್ತಿದಾರರ ವಿಳಾಸ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ, ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ನಿಮ್ಮ ಆಸ್ತಿಯಲ್ಲಿ ಬಾಡಿಗೆದಾರರು ಇದ್ದರೆ ಅವರ ಹೆಸರು ಮತ್ತು ಇತರೇ ವಿವರಗಳನ್ನು ದಾಖಲು ಮಾಡಬೇಕು. ನಿಮ್ಮ ಆಸ್ತಿ ಬರುವ ರಸ್ತೆಯನ್ನು ಸರಿಯಾಗಿ ಆಯ್ಕೆ ಮಾಡಿ, ಆಸ್ತಿಯು ವಾಣಿಜ್ಯ, ವಸತಿ, ವಾಣಿಜ್ಯೇತರವೇ ಎಂದು ಸರಿಯಾಗಿ ದಾಖಲು ಮಾಡಬೇಕು. ನಿಮ್ಮ ಆಸ್ತಿಯ ವಿಸ್ತೀರ್ಣವನ್ನು ಮತ್ತು ಕಟ್ಟಡ ವಿಸ್ತೀರ್ಣವನ್ನು ಸರಿಯಾಗಿ ದಾಖಲಿಸಿ ನಿಮ್ಮ ರಸ್ತೆಯ ಮಾರ್ಗದರ್ಶಿ ವೌಲ್ಯವನ್ನು, ಖಚಿತಪಡಿಸಿಕೊಳ್ಳಬೇಕು. ಕಟ್ಟಡ ಮಾಹಿತಿಯನ್ನು, ಮಹಡಿ ಮಾಹಿತಿಯನ್ನು ಮತ್ತು ಕೇಳಿರುವ ಮಾಹಿತಿಗಳಿಗೆ ಅನುಗುಣವಾಗಿ ವಿವರಗಳನ್ನು ದಾಖಲಿಸಿ, ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಪರಿಶೀಲಿಸಬೇಕು. ನೆಟ್‌ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಗೂಗಲ್ ಪೇ, ಫೋನ್ ಪೇ, ಬ್ಯಾಂಕ್ ಮೂಲಕ ನಿಮ್ಮ ಪಾವತಿಯನ್ನು ಪೂರ್ಣಗೋಳಿಸಬಹುದು. ಆಪ್‌ಲೈನ್‌ನಲ್ಲಿ ಪಾವತಿ ಮಾಡಬಹುದಾದರೆ ಚಲನ್ ಪಡೆದುಕೊಂಡು ನಿಮಗೆ ಅನುಕೂಲವಾಗುವ ಯಾವುದೇ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು.

ಉಪಮೇಯರ್ ಸುಮಂಗಳಾ ರಾವ್, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಶೋಭಾ ರಾಜೇಶ್, ಲೀಲಾವತಿ ಪ್ರಕಾಶ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

''ಮಂಗಳೂರಿನ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದೀಗ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿ ಸಲಾಗಿದೆ. ಪಾಲಿಕೆ ವಿವಿಧ ಸೇವೆಗಳು ಇದೀಗ ಡಿಜಿಟಲ್ ಆಗುತ್ತಿದ್ದು, ಆಡಳಿತಾತ್ಮಕ ಸುಧಾರಣೆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ''.- ಡಿ. ವೇದವ್ಯಾಸ ಕಾಮತ್, ಶಾಸಕರು

''ಜನರ ಅಗತ್ಯತೆಗೆ ತಕ್ಕಂತೆ ಇದೀಗ ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮನಪಾ ಮುಂದಾಗಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿ ಆರಂಭವಾಗಲಿದ್ದು, ಸಾರ್ವಜನಿಕರು ಕೂಡ ಸಹಕಾರ ನೀಡಬೇಕು'' - ಡಾ.ವೈ. ಭರತ್ ಶೆಟ್ಟಿ, ಶಾಸಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News