ನಕಲಿ ಆರ್ಟಿ-ಪಿಸಿಆರ್ ಪ್ರಮಾಣಪತ್ರಗಳನ್ನು ಬಳಸಿದ ಆರೋಪದ ಮೇಲೆ 1 ತಿಂಗಳು ಜೈಲಿನಲ್ಲಿದ್ದ ಕೇರಳ ಮಹಿಳೆಯರ ಬಿಡುಗಡೆ

Update: 2021-11-01 18:16 GMT
Photo: Social Media

ಲಕ್ನೊ: ಮೂರು ಮಕ್ಕಳ ತಾಯಿಯಾದ ಮುಹ್ಸಿನಾ, ಉತ್ತರ ಪ್ರದೇಶದ ಲಕ್ನೋ ಜಿಲ್ಲಾ ಕಾರಾಗೃಹದಲ್ಲಿ ಒಂದು ತಿಂಗಳು ಕಳೆದ ನಂತರ ತನ್ನ ಅತ್ತೆ ನಸೀಮಾ ಹಾಗೂ  ತನ್ನ ಏಳು ವರ್ಷದ ಮಗು ಆತೀಫ್ ಅವರೊಂದಿಗೆ ಸೋಮವಾರ ಕೇರಳಕ್ಕೆ ವಿಮಾನದಲ್ಲಿ ಬಂದು ತಲುಪಿದ್ದಾರೆ.  

ಫೆಬ್ರವರಿಯಿಂದ ಉತ್ತರಪ್ರದೇಶದಲ್ಲಿ ಕಠಿಣ ಆರೋಪದಡಿಯಲ್ಲಿ ಜೈಲಿನಲ್ಲಿರುವ ತನ್ನ ಪತಿ ಅನ್ಶಾದ್ ಬದ್ರುದ್ದೀನ್ ಅವರನ್ನು ಭೇಟಿಯಾಗದಿರುವ ಬಗ್ಗೆ ಬೇಸರದಲ್ಲಿರುವ  ಮುಹ್ಸಿನಾ  ತನ್ನ ಎರಡು ವರ್ಷದ ಮಗಳೊಂದಿಗೆ ಮತ್ತೆ ಒಂದಾಗಲಿದ್ದಾರೆ.

ಸೆಪ್ಟೆಂಬರ್ 27 ರಂದು ಜೈಲಿನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡುವಾಗ ನಕಲಿ ಆರ್ಟಿ-ಪಿಸಿಆರ್ ಪ್ರಮಾಣಪತ್ರಗಳನ್ನು ಬಳಸಿದ ಆರೋಪದ ಮೇಲೆ ಜೈಲಿಗೆ ಕಳುಹಿಸಲ್ಪಟ್ಟ ಮೂವರು ಮಹಿಳೆಯರಲ್ಲಿ ಮುಹ್ಸಿನಾ ಹಾಗೂ  ನಸೀಮಾ ಸೇರಿದ್ದಾರೆ. ಸಮೀಪದಲ್ಲಿ ಯಾವುದೇ ಕುಟುಂಬವಿಲ್ಲದ ಕಾರಣ ಆತೀಫ್ ಕೂಡ ಜೈಲಿಗೆ ಕಳುಹಿಸಲ್ಪಟ್ಟರು. ಜೈಲಿನಲ್ಲಿರುವ ತಮ್ಮ ಮಗ ಫಿರೋಝ್ ಖಾನ್ ರನ್ನು ಭೇಟಿ ಮಾಡಲು ಬಂದಿದ್ದ 65 ವರ್ಷದ ಹಲೀಮಾ ಜೈಲಿನಲ್ಲಿದ್ದ ಮೂರನೇ ಮಹಿಳೆಯಾಗಿದ್ದರು. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾದ ಅನ್ಶಾದ್ ಬದ್ರುದ್ದೀನ್ ಮತ್ತು ಫಿರೋಝ್ ಖಾನ್ ಅವರನ್ನು ಫೆಬ್ರವರಿಯಲ್ಲಿ ಉತ್ತರಪ್ರದೇಶದಲ್ಲಿ ಸ್ಫೋಟಗಳನ್ನು ನಡೆಸಲು ಯೋಜಿಸಿದ್ದಾರೆಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಪಿಎಫ್ ಐ ಈ ಆರೋಪವನ್ನು ನಿರಾಕರಿಸಿದ್ದು,  ಸಂಘಟನೆಯನ್ನು ಬಲಪಡಿಸಲು ಈ ಇಬ್ಬರನ್ನು ಉತ್ತರ ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಿಕೊಂಡಿತ್ತು.

ಇಬ್ಬರು ವಯೋವೃದ್ಧ ಅಸ್ವಸ್ಥ ಮಹಿಳೆಯರು ಹಾಗೂ  ತಾಯಿಯನ್ನು ಮಗುವಿನೊಂದಿಗೆ ಜೈಲಿನಲ್ಲಿಟ್ಟ ಸುದ್ದಿ ಕೇರಳದಲ್ಲಿ ಆಕ್ರೋಶವನ್ನು ಸೃಷ್ಟಿಸಿತ್ತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು  ಜಾಮೀನು ಆದೇಶದಲ್ಲಿ "ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಹಣದ ಲಾಭಕ್ಕಾಗಿ ನಕಲಿ ಆರ್ ಟಿಪಿಸಿಆರ್ ವರದಿಯನ್ನು ನೀಡುವ ಮೂಲಕ ಅರ್ಜಿದಾರರು / ಆರೋಪಿಗಳಿಗೆ ವಂಚಿಸಿದ್ದಾರೆ" ಎಂದು ಗಮನಿಸಿದ್ದಾರೆ. 

ಇಬ್ಬರು ಅಸ್ವಸ್ಥ ವೃದ್ಧ ಮಹಿಳೆಯರನ್ನು ಬಂಧಿಸಿದ್ದಕ್ಕಾಗಿ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು,  ಬಂಧನವನ್ನು "ಕಾನೂನುಬಾಹಿರ" ಎಂದು ಕರೆದಿದ್ದಾರೆ. ಕೇರಳದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯರನ್ನು ನೆರೆದಿದ್ದ ಭಾರೀ ಸಂಖ್ಯೆಯ ಜನರು ಘೋಷಣೆಗಳೊಂದಿಗೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News