ಎಳೆಯ ಮನಸ್ಸುಗಳಲ್ಲಿ ನಾಡು ನುಡಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ: ಪ್ರದೀಪ್ ಕುಮಾರ್ ಕಲ್ಕೂರ

Update: 2021-11-01 15:58 GMT

ಕೊಣಾಜೆ : ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ನಾಡು ನುಡಿಯ ವೈಶಿಷ್ಟ್ಯತೆ, ಮಹತ್ವಗಳನ್ನು ಎಳೆಯ ಮನಸುಗಳಲ್ಲಿ ತಿಳಿಯಪಡಿಸುವ ಕಾರ್ಯ ಆಗಬೇಕಿದೆ.  ಮಕ್ಕಳನ್ನು ಮಾನವೀಯತೆಯ ಸೆಳೆಯಾಗಿ ಬೆಳೆಸಬೇಕಿದೆ. ಅವರು ಮುಂದಿನ ಜನಾಂಗಕ್ಕೆ ನಾಡಿನ ಬೆಳಕಾಗಿ ಮೂಡಿಬರಬೇಕು ಎಂದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸೋಮವಾರ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಕರುನಾಡು ಸಿರಿಗಂಧದ ನಾಡು. ಪ್ರಾದೇಶಿಕ ಪ್ರಾಂತ್ಯಗಳಲ್ಲಿ ತೌಳವ ಭಾಗದ ಸಂಸ್ಕೃತಿಯು ಕೂಡಾ ವಿಶಿಷ್ಡವಾದುದು. ತುಳುನಾಡಿನಲ್ಲಿ ಬೇರೆ ಬೇರೆ ಭಾಷೆಯ ಜನರಿದ್ದರೂ ಕನ್ನಡಕ್ಕೆ ವಿಶೇಷ ಗೌರವ ಕೊಡುವ ನೆಲ ಇದಾಗಿದೆ. ನಾವು ತಂತ್ರಜ್ಞಾನವನ್ನು ಸದುಪಯೋಗವಾಗಿಸಿಕೊಂಡು  ನಮ್ಮ ನಾಡು ನುಡಿಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನೆರವೇರಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿವಿಯ ಕುಲಪತಿ ಪ್ರೊ.ಸತೀಶ್‌ ಕುಮಾರ್ ಭಂಡಾರಿ ಅವರು, ಇಂದು ಆಧುನಿಕತೆಯಲ್ಲಿ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ವಿಶ್ವವಿದ್ಯಾನಿಲಯದ ವತಿಯಿಂದ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ವಿವಿಯು ಕನ್ನಡವನ್ನು ಉಳಿಸುವ ಬೆಳೆಸುವ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದೆ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್  ಡಾ.ಪಿ.ಎಸ್.ಪ್ರಕಾಶ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಮೇಜರ್ ಡಾ.ಶಿವಕುಮಾರ್ ಹಿರೇಮಠ್, ಎನ್ ಎಸ್ ಎಸ್ ಸಂಯೋಜಕರಾದ ಶಶಿಕುಮಾರ್ ಶೆಟ್ಟಿ,  ಡಾ.ಸುಮಲತಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ.ಸಾಯಿಗೀತ ಅವರು ಸ್ವಾಗತಿಸಿದರು. ಸುಮಿತಾ ಚೌಟ ಅವರು ಕಾರ್ಯಕ್ರಮ ನಿರೂಪಿಸಿದರು. ಶಶಿಕುಮಾರ್ ಶೆಟ್ಟಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News