×
Ad

ದುರ್ಬಲ ವರ್ಗದ ಜನರಿಗೆ ಕಾನೂನು ನೆರವಿನ ಖಾತರಿ ನೀಡುವ ಅಗತ್ಯತೆ ಇದೆ: ನ್ಯಾಯಮೂರ್ತಿ ಲಲಿತ್

Update: 2021-11-01 21:33 IST

ತಿರುವನಂತಪುರ, ನ. 1: ಸಮಾಜದ ದುರ್ಬಲ ವರ್ಗದವರಿಗೆ ಕಾನೂನು ರಕ್ಷಣೆಯ ಖಾತರಿ ನೀಡುವ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು.ಯು. ಲಲಿತ್ ಅಭಿಪ್ರಾಯಿಸಿದ್ದಾರೆ.

ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಮಾಜದ ದುರ್ಬಲ ವರ್ಗದವರಿಗೆ ಕಾನೂನು ನೆರವಿನ ಖಾತರಿ ನೀಡಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬದ್ಧವಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಲಲಿತ್ ಅವರು ಹೇಳಿದರು.

‘ಅಝಾದಿ ಕಾ ಅಮೃತ್ ಮಹೋತ್ಸವದ’ ಅಂಗವಾಗಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ತಿರುವನಂತಪುರದ ವೆಲ್ಲಾರ್ ಕ್ರಾಫ್ಟ್ ಗ್ರಾಮದಲ್ಲಿ ಆಯೋಜಿಸಿದ ಸಮಾಜದ ದುರ್ಬಲ ವರ್ಗದವರಿಗಾಗಿ ಕಾನೂನು ಅರಿವು ಶಿಬಿರ ಹಾಗೂ ಎಕ್ಸ್ಪೊದಲ್ಲಿ ಅವರು ಮಾತನಾಡಿದರು. ಸಮಾಜದ ದುರ್ಬಲ ವರ್ಗದವರಿಗೆ ಕಾನೂನು ನೆರವು ನೀಡಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ, ಅರಿವು ಇಲ್ಲದೇ ಇರುವುದರಿಂದ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಅವರು ತಿಳಿಸಿದರು. 

ಕಾನೂನು ಸೇವೆಗಳ ಸಂಸ್ಥೆಗಳ ಮೂಲಕ ಅರ್ಹರಿಗೆ ಕಾನೂನು ನೆರವು ತಲುಪುವ ಖಾತರಿ ನೀಡುವ ಬದ್ದತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಇದೆ ಎಂದು ಅರು ಹೇಳಿದರು. ‘‘ಕಾನೂನು ಸೇವೆಗಳ ಸಂಸ್ಥೆಗಳ ಕಾನೂನು ಸೇವೆಗಳು ರಾಜ್ಯದ ಮೂಲೆ ಮೂಲೆಗೂ ತಲುಪಬೇಕು. ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಉಚಿತ ಕಾನೂನು ನೆರವು ಪಡೆಯುವ ಹಕ್ಕು ನೀಡಿದೆ. ಆದುದರಿಂದ ಫಲಾನುಭವಿಗಳಲ್ಲಿ ಅರಿವು ಮೂಡಿಸುವ ಮೂಲಕ ಅವರು ಕಾನೂನು ಪ್ರಯೋಜನ ಪಡೆಯುವಂತೆ ಮಾಬೇಕು’’ ಎಂದು ಲಲಿತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News