ಕಾಪು ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ
ಕಾಪು : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಕನ್ನಡ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹೇಳಿದರು.
ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 66 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿದ್ದು, ಕಾಪು ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಹೆಜಮಾಡಿ ಬಂದರು ಕಾಮಗಾರಿಗೆ ಆದಷ್ಟು ಬೇಗ ಚಾಲನೆ ನೀಡಲಾಗುವುದು. ಕೈಗಾರಿಕಾ, ಪ್ರವಾಸೋಧ್ಯಮ ಕ್ಷೇತ್ರದಲ್ಲೂ ಪ್ರವಾಸಿಗರನ್ನು ಸೆಳೆಯುವಲ್ಲಿ ಕಾಪು ಕ್ಷೇತ್ರ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಧಕರಾದ ಈಶ್ವರ್ ಮಲ್ಪೆ, ಶಶಾಂಕ್, ಸಂಜೀವ ಅಂಚನ್ ಇವರನ್ನು ಸನ್ಮಾನಿಸಲಾಯಿತು. 24 ಮಂದಿಗೆ 1.24 ಲಕ್ಷ ರೂ. ಪ್ರಾಕೃತಿಕ ವಿಕೋಪದ ಚೆಕ್ ವಿತರಿಸಲಾಯಿತು. ಪುರಷಭೆಯ ವತಿಯಿಂದ ಇಬ್ಬರಿಗೆ ಶ್ರವಣ ಸಾಧನ ವಿತರಿಸಲಾಯಿತು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇನ್ಸ್‍ಪೆಕ್ಟರ್ ಪ್ರಕಾಶ್, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್, ಕಾಪು ಎಸ್‍ಐ ರಾಘವೇಂದ್ರ ಸಿ., ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್, ಕಾಪು ತಾಲ್ಲೂಕು ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಮರಾಠೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ ಅತಿಥಿಗಳಾಗಿದ್ದರು.
ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕದಳದ ವತಿಯಿಂದ ಧ್ವಜ ವಂದನಾ ಕಾರ್ಯಕ್ರಮ ನಡೆಯಿತು. ಕಾಪು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು.
ಉಪತಹಶೀಲ್ದಾರ್ ಕೆ. ರವಿಶಂಕರ್, ಅಶೋಕ್ ಕೋಟೆಕಾರ್, ಚಂದ್ರಹಾಸ ಬಂಗೇರ, ಕಂದಾಯ ನಿರೀಕ್ಷಕ ಸುದೀರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.