×
Ad

ಭಟ್ಕಳದಲ್ಲಿ ಕನ್ನಡ ರಾಜ್ಯೋತ್ಸವ

Update: 2021-11-01 22:41 IST

ಭಟ್ಕಳ : ಮಾತೃ ಭಾಷೆಯಾದ ಕನ್ನಡದ ಪರಂಪರೆಯನ್ನು ಗಟ್ಟಿಗೊಳಿಸಬೇಕು. ಕನ್ನಡದದಲ್ಲಿ ಮಾತನಾಡಲು, ವ್ಯವಹರಿಸಲು ಯಾವುದೇ ಕಾರಣಕ್ಕೂ ಹಿಂಜರಿಕೆ, ಮುಜುಗರ ಬೇಡ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಯಾಂಕು, ಮೊಹಲ್‍ ಗಳಲ್ಲಿ ಕನ್ನಡ ಭಾಷೆ ಮಾಯವಾಗಿದ್ದು, ಎಲ್ಲೆಲ್ಲೂ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆಗಳದ್ದೇ ಕಾರುಬಾರು ಎನ್ನುವಂತಾಗಿದೆ. ನಾವು ಕನ್ನಡದಲ್ಲಿ ಮಾತನಾಡಿದರು ಇಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸುತ್ತಾರೆ. ಕನ್ನಡನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಸಿಗಬೇಕು. ಕನ್ನಡ ಎಲ್ಲೆಲ್ಲೂ ವ್ಯವಹಾರದ ಭಾಷೆಯಾಗಬೇಕು ಎಂದ ಅವರು ಕರ್ನಾಟಕ ಏಕೀಕರಣಕ್ಕಾಗಿ ಹಿರಿಯರ ಸಾಕಷ್ಟು ಪರಿಶ್ರಮ, ಹೋರಾಟ ಇದೆ. ನಮ್ಮ ಯುವ ಪೀಳಿಗೆಗೆ ಕನ್ನಡ ಏಕೀಕರಣದ ಇತಿಹಾಸವನ್ನು ತಿಳಿಸಬೇಕು. ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದರು. ಕನ್ನಡ ರಾಜ್ಯೋತ್ಸವದ ಧ್ವಜಾರೋಹರಣ ನೆರವೇಸಿ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಅವರು ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸ ನೀಡಿದ ಜಾಲಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಸಾಹಿತಿ ಶ್ರೀಧರ ಶೇಟ್ ಮಾತನಾಡಿ, ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಪರಭಾಷಾ ವ್ಯಾಮೋಹದಿಂದ ಮಾತೃಭಾಷೆ ಕನ್ನಡಕ್ಕೆ ಹಿನ್ನಡೆಯಾಗಬಾರದು ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ ಚಂದ್ರಶೇಖರ ಪಡುವಣಿ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನಂತ ಹೆಬ್ಬಾರ ಕೋಟಖಂಡ,  ಹರಿಸೇವೆಗೆ ಸಂಬಂಧಿಸಿದಂತೆ ಕಾಯ್ಕಿಣಿಯ ಕುಪ್ಪಾ ನಾಯ್ಕ,  ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೇಂಗ್ರೆಯ ಸುಬ್ರಾಯ ಭಟ್ಟ, ಕ್ರೀಡೆಯಲ್ಲಿ ಸಾಧನೆ ಮಾಡಿದ ಉಪನ್ಯಾಸಕ ರಂಗಾಜಿ ಪಟಗಾರ, ಮುಖ್ಯಶಿಕ್ಷಕ ಪ್ರಶಾಂತ ಪಟಗಾರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾ.ಪ. ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ರಾಧಿಕಾ, ಜಾಲಿ ಪ.ಪಂ. ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಉಪಸ್ಥಿತರಿದ್ದರು.

ತಹಸೀಲ್ದಾರ ರವಿಚಂದ್ರ ಸ್ವಾಗತಿಸಿದರೆ, ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ವಂದಿಸಿದರು. ಶಿಕ್ಷಕರಾದ ಪರಮೇಶ್ವರ ನಾಯ್ಕ, ಗೋಪಾಲ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ನಂತರ ನಡೆದ ವಿದ್ಯಾರ್ಥಿಗಳ ಕನ್ನಡಪರ ನೃತ್ಯ ಗಮನ ಸೆಳೆಯಿತು. ನ್ಯೂ ಇಂಗ್ಲೀಷ್ ಆವರಣದಲ್ಲಿ ಕನ್ನಡ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯೊಂದಿಗೆ ತಾಲ್ಲೂಕು ಕ್ರೀಡಾಂಗಣಕ್ಕೆ ಬರಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News