ಬ್ಯಾರಿ ಅಕಾಡಮಿಯಿಂದ ರಾಜ್ಯೋತ್ಸವ, ಸನ್ಮಾನ ಕಾರ್ಯಕ್ರಮ
ಮಂಗಳೂರು, ನ.1: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಉಪನ್ಯಾಸ, ಸನ್ಮಾನ ಕಾರ್ಯಕ್ರಮ, ಭಾಷಣ ಸ್ಪರ್ಧೆಯು ಮಂಗಳೂರು ನಗರದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ತೆಂಗಿನ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಕನ್ನಡ ದಿನದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭ ನಾಟಕ, ಸಿನೆಮಾ, ಕಿರುತೆರೆ ಕಲಾವಿದ ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈಗೆ ವಿಶೇಷ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಕನ್ನಡದಲ್ಲಿ ಸಾಧನೆಗೈದ ಐದು ಮಂದಿ ಬ್ಯಾರಿ ಭಾಷಿಕರಾದ ಕೆ.ಎಂ.ಸಿದ್ದೀಕ್ ಮೊಂಟುಗೋಳಿ, ಅಬೂಬಕರ್ ಅನಿಲಕಟ್ಟೆ, ಹನೀಫ್ ಪುತ್ತೂರು, ಇಮ್ತಿಯಾಝ್ ಶಾ ತುಂಬೆ, ಸಮೀರಾ ಕಡಬರನ್ನು ಸನ್ಮಾನಿಸಲಾಯಿತು.
ಇನ್ನು ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ 15 ಮಂದಿ ಕನ್ನಡ ಭಾಷಣ ಮಾಡಿದರು. ನವಾಝ್ ಕಡಂಬು, ಅಕ್ಬರ್ ಅಲಿ ಪೊನ್ನೊಡಿ, ಮುಹಮ್ಮದ್ ನಝೀಮ್, ಅಬ್ದುಲ್ ನಾಶೀರ್, ಬಾತಿಶ್ ತೆಕ್ಕಾರ್, ಮುಹಮ್ಮದ್ ನೌಷಾದ್, ಶಿರಾಜುದ್ದೀನ್ ಗುರುವಾಯನಕೆರೆ, ಯಹ್ಯಾ ಬರಿಮಾರ್, ಮುನೀರಾ ಭಾಷಣ ಮಾಡಿದರು. ವಿಜೇತರಿಗೆ ಪ್ರಮಾಣ ಪತ್ರ, ಗೌರವಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸದಸ್ಯರಾದ ಬಶೀರ್ ಬೈಕಂಪಾಡಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಹಸನಬ್ಬ, ಅನ್ಸಾರ್ ಬೆಳ್ಳಾರೆ, ಸದಸ್ಯ ರಾಧಾಕೃಷ್ಣ ನಾವಾಡ ಉಪಸ್ಥಿತರಿದ್ದರು. ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಶಂಶೀರ್ ಬುಡೋಳಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.