ಮೀನುಗಾರಿಕಾ ವ್ಯಾಪ್ತಿಗೆ ಸಂಬಂಧಿಸಿದ ವಿವಾದದಿಂದ ಹಿಂದೆ ಸರಿಯದಿದ್ದರೆ ತೀವ್ರ ಕ್ರಮ: ಫ್ರಾನ್ಸ್ ಗೆ ಬ್ರಿಟನ್ ಎಚ್ಚರಿಕೆ

Update: 2021-11-01 17:39 GMT
ಸಾಂದರ್ಭಿಕ ಚಿತ್ರ

ಲಂಡನ್, ನ.1: ಮೀನುಗಾರಿಕಾ ವ್ಯಾಪ್ತಿಗೆ ಸಂಬಂಧಿಸಿದ ವಿವಾದದಿಂದ 48 ಗಂಟೆಯೊಳಗೆ ಹಿಂದೆ ಸರಿಯದಿದ್ದರೆ ತೀವ್ರ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಫ್ರಾನ್ಸ್‌ಗೆ ಬ್ರಿಟನ್ ಸೋಮವಾರ ಎಚ್ಚರಿಕೆ ನೀಡಿದೆ.

ಬ್ರಿಟನ್‌ನ ಜಲವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಫ್ರಾನ್ಸ್‌ನ ಎಲ್ಲಾ ಮೀನುಗಾರರಿಗೆ ಲೈಸೆನ್ಸ್ ಒದಗಿಸಲು ಬ್ರಿಟನ್ ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ, ಉಭಯ ದೇಶಗಳ ನಡುವೆ ಸಂಚರಿಸುವ ಲಾರಿಗಳ ತಪಾಸಣೆ ಬಿಗಿಗೊಳಿಸುವುದು ಸೇರಿದಂತೆ ಉದ್ದೇಶಿತ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಫ್ರಾನ್ಸ್ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್, ಈ ಹಿಂದೆ ಬ್ರಿಟನ್‌ನ ಜಲವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿರುವುದಕ್ಕೆ ಪುರಾವೆ ಒದಗಿಸುವ ದೋಣಿಗಳಿಗೆ ಮಾತ್ರ ಮೀನುಗಾರಿಕೆಗೆ ಅವಕಾಶವಿದೆ ಎಂದಿದೆ.

ಫ್ರಾನ್ಸ್ ಅಸಮಂಜಸ ಬೆದರಿಕೆ ಒಡ್ಡುತ್ತಿದೆ. ಈ ಬೆದರಿಕೆಯನ್ನು 48 ಗಂಟೆಯೊಳಗೆ ಹಿಂದಕ್ಕೆ ಪಡೆಯದಿದ್ದರೆ, ಯುರೋಪಿಯನ್ ಯೂನಿಯನ್‌ನೊಂದಿಗಿನ ನಮ್ಮ ವ್ಯಾಪಾರ ಒಪ್ಪಂದದ ವ್ಯವಸ್ಥೆಯನ್ನು ಬಳಸಿಕೊಂಡು ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಫ್ರಾನ್ಸ್‌ನ ವರ್ತನೆ ತರವಲ್ಲ ಮತ್ತು ವ್ಯಾಪಾರ ಒಪ್ಪಂದಕ್ಕೆ ವಿರುದ್ಧವಾಗಿದೆ. ಯಾರಾದರೂ ವ್ಯಾಪಾರ ಒಪ್ಪಂದಕ್ಕೆ ಅನ್ಯಾಯ ಎಸಗುವ ರೀತಿಯಲ್ಲಿ ವರ್ತಿಸಿದರೆ ಅವರ ವಿರುದ್ಧ ಕಾನೂನುಕ್ರಮಕ್ಕೆ ಮತ್ತು ಅವರಿಂದ ಪರಿಹಾರ ಪಡೆಯಲು ಅವಕಾಶವಿದೆ. ಫ್ರಾನ್ಸ್ ಹಿಂದೆ ಸರಿಯದಿದ್ದರೆ ನಾವು ಈ ಕ್ರಮ ಕೈಗೊಳ್ಳಲಿದ್ದೇವೆ ಎಂದು ಬ್ರಿಟನ್‌ನ ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಲಿಝ್ ಟ್ರೂಸ್ ಹೇಳಿರುವುದಾಗಿ ‘ಸ್ಕೈ ನ್ಯೂಸ್’ ವರದಿ ಮಾಡಿದೆ.

ಕಳೆದ ವಾರ, ಫ್ರಾನ್ಸ್‌ನ ಲೆ ಹಾರ್ವೆ ಬಂದರಿನ ಬಳಿಯ ಸಮುದ್ರವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬ್ರಿಟನ್‌ನ ಡ್ರೆಜರ್ ನೌಕೆಯನ್ನು ಫ್ರಾನ್ಸ್ ವಶಕ್ಕೆ ಪಡೆದ ಬಳಿಕ ಈ ವಿವಾದ ತಾರಕಕ್ಕೇರಿದೆ. ಡ್ರೆಜರ್ ಸೂಕ್ತ ದಾಖಲೆಪತ್ರವಿಲ್ಲದೆ ಸಂಚರಿಸುತ್ತಿತ್ತು ಎಂದು ಫ್ರಾನ್ಸ್ ಹೇಳಿದ್ದರೆ, ತನ್ನ ಬಳಿ ಅಗತ್ಯವಿರುವ ಎಲ್ಲಾ ದಾಖಲೆಪತ್ರಗಳಿವೆ ಎಂದು ದೋಣಿಯ ಮಾಲಕ ಹೇಳಿದ್ದ. ಫ್ರಾನ್ಸ್‌ನ ಬಂದರಿನಲ್ಲಿ ಸರಕು ಇಳಿಸುವುದಕ್ಕೆ ಬ್ರಿಟನ್‌ನ ದೋಣಿಗಳಿಗೆ ನಿಷೇಧ, ಬ್ರಿಟನ್‌ನ ದೋಣಿಗಳ ವಿರುದ್ಧ ಹೆಚ್ಚುವರಿ ತಪಾಸಣೆ, ಲಾರಿಗಳ ತಪಾಸಣೆ ಬಿಗಿಗೊಳಿಸುವುದು, ಕಸ್ಟಮ್ಸ್ ಮತ್ತು ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ತಪಾಸಣೆ ಬಿಗಿಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಫ್ರಾನ್ಸ್ ಹೇಳಿಕೆ ನೀಡಿದೆ.

ಈ ಮಧ್ಯೆ ‘ಯುರೋಪಿಯನ್ ಯೂನಿಯನ್(ಇಯು)ನಲ್ಲಿ ಇರುವುದಕ್ಕಿಂತ ಹೆಚ್ಚಿನ ಹಾನಿ ಯೂನಿಯನ್ ಅನ್ನು ತೊರೆದರೆ ಆಗುತ್ತದೆ ಎಂಬುದನ್ನು ತೋರಿಸಿಕೊಡುವಂತೆ’ ಇಯು ಸದಸ್ಯ ರಾಷ್ಟ್ರಗಳಿಗೆ ಫ್ರಾನ್ಸ್ ಅಧ್ಯಕ್ಷರು ಬರೆದಿರುವ ಪತ್ರದಿಂದ ತಾನು ಗೊಂದಲಕ್ಕೆ ಒಳಗಾಗಿದ್ದೇನೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಇಯು ತೊರೆದಿರುವ ಬ್ರಿಟನ್ ಅನ್ನು ಉದ್ದೇಶಿಸಿ ಫ್ರಾನ್ಸ್ ಈ ಪತ್ರ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News