ಜಪಾನ್ ಚುನಾವಣೆ: ಪ್ರಧಾನಿ ಫುಮಿಯೊ ಕಿಶಿಡಾಗೆ ಗೆಲುವು

Update: 2021-11-01 17:47 GMT

ಟೋಕಿಯೊ, ನ.1: ಜಪಾನ್‌ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಫುಮಿಯೊ ಕಿಶಿಡಾ ಅವರ ನೇತೃತ್ವದ ಮೈತ್ರಿಕೂಟ ಬಹುಮತ ಪಡೆದಿರುವುದಾಗಿ ಘೋಷಿಸಲಾಗಿದೆ.

ಕಳೆದ ತಿಂಗಳು ಜಪಾನ್‌ನ ಪ್ರಧಾನಿಯಾಗಿ ಕಳೆದ ತಿಂಗಳು ಪ್ರಮಾಣವಚನ ಸ್ವೀಕರಿಸಿದ್ದ ಕಿಶಿಡಾ, ಕೊರೋನ ಸೋಂಕಿನ ಆಘಾತದಿಂದ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವಂತಾಗಲು ಶೀಘ್ರವೇ ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸುವುದಾಗಿ ಹೇಳಿದ್ದರು.

ಸಂಸತ್ತಿನ ಕೆಳಮನೆಯ 465 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ದೀರ್ಘಾವಧಿಯಿಂದ ಅಧಿಕಾರದಲ್ಲಿರುವ ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಮತ್ತದರ ಮಿತ್ರಪಕ್ಷ ಕೊಮೈಟೊ 293 ಸ್ಥಾನಗಳಲ್ಲಿ ಗೆಲುವು ಪಡೆದು ನಿಚ್ಚಳ ಬಹುಮತ ಗಳಿಸಿದೆ ಎಂದು ಅಧಿಕೃತ ಘೋಷಣೆಯ ಬಳಿಕ ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ. ಇದರಲ್ಲಿ ಎಲ್‌ಡಿಪಿ ಪಕ್ಷ 261 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇದೊಂದು ಕಠಿಣ ಮತ್ತು ನಿಕಟ ಪೈಪೋಟಿಯ ಚುನಾವಣೆಯಾಗಿತ್ತು ಮತ್ತು ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಲಭಿಸಿದೆ. ದೇಶವು ಎಲ್‌ಡಿಪಿ-ಕೊಮೈಟೊ ಮೈತ್ರಿಕೂಟದ ಆಡಳಿತದಲ್ಲಿ ಮತ್ತಷ್ಟು ಪ್ರಗತಿಯ ಪಥದಲ್ಲಿ ಮುನ್ನಡೆಯುವುದೆಂಬ ಜನರ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ಫಲಿತಾಂಶ ಅಧಿಕೃತವಾಗಿ ಘೋಷಣೆಯಾದ ಬಳಿಕ ಕಿಶಿಡಾ ಹೇಳಿದ್ದಾರೆ.

ಎಲ್‌ಡಿಪಿ ಮೈತ್ರಿಕೂಟ ಈ ಹಿಂದೆ ಸಂಸತ್ತಿನಲ್ಲಿ 305 ಸ್ಥಾನ ಹೊಂದಿತ್ತು. ಎಲ್‌ಡಿಪಿ ಮೈತ್ರಿಕೂಟದ ಸರಕಾರದ ನೇತೃತ್ವ ವಹಿಸಿದ್ದ ಯೊಶಿಹಿಡೆ ಸುಗಾ ಕೊರೋನ ಸೋಂಕಿನ ಸೂಕ್ತ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂಬ ಟೀಕೆಯ ಬಳಿಕ ರಾಜೀನಾ ಮೆ ನೀಡಿದ ಬಳಿಕ ಕಿಶಿಡಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಈ ಬಾರಿಯ ಚುನಾವಣೆಯ ಫಲಿತಾಂಶದ ಬಗ್ಗೆ ಕುತೂಹಲವಿತ್ತು. ಆದರೆ ಪ್ರಮುಖ ವಿಪಕ್ಷಗಳಾದ ಕಾನ್‌ಸ್ಟಿಟ್ಯೂಷನಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಜಪಾನ್ ಮತ್ತು ಜಪಾನ್ ಕಮ್ಯುನಿಸ್ಟ್ ಪಕ್ಷ(ಸಿಡಿಪಿ)ಯ ನಡುವಿನ ಭಿನ್ನಾಭಿಪ್ರಾಯದಿಂದಾಗಿ ವಿಪಕ್ಷಗಳಿಗೆ ಸೋಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News