ಟ್ವೆಂಟಿ-20 ಕ್ರಿಕೆಟ್: ಯಶಸ್ವಿ ನಾಯಕನಾಗಿ ಹೊರಹೊಮ್ಮಿದ ಇಯಾನ್ ಮೊರ್ಗನ್

Update: 2021-11-02 06:25 GMT
photo: AP

ದುಬೈ: ಭಾರತ ಹಾಗೂ  ಅಫ್ಘಾನಿಸ್ತಾನದ ಮಾಜಿ ನಾಯಕರಾದ ಎಂ.ಎಸ್. ಧೋನಿ ಮತ್ತು ಅಸ್ಗರ್ ಅಫ್ಘಾನ್ ಅವರನ್ನು ಮೀರಿಸಿದ ಇಂಗ್ಲೆಂಡ್‌ನ ಇಯಾನ್ ಮೊರ್ಗನ್ ಪುರುಷರ ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಾರ್ವಕಾಲಿಕ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ.

ಶ್ರೀಲಂಕಾ ವಿರುದ್ಧ ಸೋಮವಾರ ಇಂಗ್ಲೆಂಡ್‌ 26 ರನ್‌ಗಳ ಗೆಲುವು ಸಾಧಿಸಿದ್ದು, ಇದು ಮೊರ್ಗನ್ ನೇತೃತ್ವದಲ್ಲಿ ಇಂಗ್ಲೆಂಡ್ ಗಳಿಸಿರುವ  43 ನೇ ಗೆಲುವಾಗಿತ್ತು. ತಲಾ  42 ಗೆಲುವುಗಳನ್ನು ಸಾಧಿಸಿದ್ದ ಧೋನಿ ಹಾಗೂ  ಅಫ್ಘಾನ್‌ ದಾಖಲೆಯನ್ನು ಮೊರ್ಗನ್ ಮೀರಿ ನಿಂತರು.

35ರ ಹರೆಯದ ಮೊರ್ಗನ್ ಅವರು ಇಲ್ಲಿಯವರೆಗೆ ಇಂಗ್ಲೆಂಡ್‌ಗೆ 41 ಸಂಪೂರ್ಣ ಗೆಲುವುಗಳನ್ನು ಹಾಗೂ  ಸೂಪರ್ ಓವರ್‌ನಲ್ಲಿ ಎರಡು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಧೋನಿ ಭಾರತವನ್ನು 41 ಪಂದ್ಯಗಳಲ್ಲಿ ಗೆಲುವು ಹಾಗೂ ಒಂದರಲ್ಲಿ ಬೌಲ್ ಔಟ್ ಮೂಲಕ ಗೆಲುವಿಗೆ ಕಾರಣರಾದರು  ಹಾಗೂ ಅಫ್ಘಾನ್ ಅವರ ನಾಯಕತ್ವದಲ್ಲಿ ಅಫ್ಗಾನಿಸ್ತಾನ  42 ಗೆಲುವುಗಳನ್ನು ಸಾಧಿಸಿದೆ.

ಅಫ್ಘಾನಿಸ್ತಾನವು ಅಫ್ಘಾನ್ ನಾಯಕತ್ವದಡಿಯಲ್ಲಿ ಒಂದು ಪಂದ್ಯವನ್ನು ಟೈ ಮಾಡಿಕೊಂಡಿತು. ಮಾರ್ಚ್ 2020 ರಲ್ಲಿ ಐರ್ಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯವನ್ನು ಅವರು ಸೂಪರ್ ಓವರ್‌ನಲ್ಲಿ ಸೋತರು.

ಧೋನಿ (72 ಪಂದ್ಯ)ಹಾಗೂ  ಅಫ್ಘಾನ್‌( 52) ಗೆ ಹೋಲಿಸಿದರೆ ಮೊರ್ಗನ್ 68 ಪಂದ್ಯಗಳಲ್ಲಿ ಈ ದಾಖಲೆಯನ್ನು ತಲುಪಿದ್ದಾರೆ.

2019 ರಲ್ಲಿ ಇಂಗ್ಲೆಂಡ್ ತಂಡನ್ನು ಮೊದಲ ಬಾರಿ 50 ಓವರ್‌ಗಳ ವಿಶ್ವಕಪ್ ಪ್ರಶಸ್ತಿ ಗೆಲ್ಲಲು  ಮುನ್ನಡೆಸಿದ ಮೊರ್ಗನ್ ಐರ್ಲೆಂಡ್‌ನೊಂದಿಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News