ಕಾಶ್ಮೀರಿ ಮುಸ್ಲಿಮರ ಚರ್ಮ ಸುಲಿಯಿರಿ ಎಂದು ದ್ವೇಷದ ಭಾಷಣ ಮಾಡಿದ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2021-11-02 15:58 GMT

ಜಮ್ಮು,ನ.2: ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದಲ್ಲಿ ಜಮ್ಮು-ಕಾಶ್ಮೀರದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ವಿಕ್ರಮ ರಾಂಧವಾ ವಿರುದ್ಧ ಜಮ್ಮುವಿನ ಪೊಲೀಸ್ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಂಧವಾ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಹೇಳಿಕೆಗಳನ್ನು ನೀಡಿದ್ದ ವೀಡಿಯೊ ಸಾಮಾಜಿಕ ಜಾಲತಾಣ ಜಾನಲ್ಲಿ ಹರಿದಾಡಿದ ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಇಲ್ಲಿ ಅಧಿಕಾರಿಗಳು ತಿಳಿಸಿದರು.

ರಾಂಧವಾರ ವೀಡಿಯೊವನ್ನು ಗಮನಿಸಿರುವ ಜಮ್ಮು-ಕಾಶ್ಮೀರ ಬಿಜೆಪಿ ಘಟಕವು ಸೋಮವಾರ ಅವರಿಗೆ ಶೋಕಾಸ್ ನೋಟಿಸನ್ನು ಕಳುಹಿಸಿದ್ದು,48 ಗಂಟೆಗಳಲ್ಲಿ ಉತ್ತರಿಸುವಂತೆ ಮತ್ತು ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಸೂಚಿಸಿದೆ. ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ್ದ ಘಟನೆಗಳ ಕುರಿತು ರಾಂಧವಾ ಅವಹೇಳನಕಾರಿಯಾಗಿ ಮಾತನಾಡಿದ್ದರೆಂದು ಆರೋಪಿಸಿಲಾಗಿದೆ.

 ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ನೀವು ಅತ್ಯಂತ ಹೊಣೆಗೇಡಿತನದ ಮತ್ತು ದ್ವೇಷವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಪಕ್ಷವು ಒಪ್ಪುವುದಿಲ್ಲ ಮತ್ತು ಇದು ಪಕ್ಷಕ್ಕೆ ಅಗೌರವ ಹಾಗೂ ಮುಜುಗರವನ್ನುಂಟು ಮಾಡಿದೆ ’ ಎಂದು ಸುನೀಲ್ ಸೇಥಿ ಅಧ್ಯಕ್ಷತೆಯ ಬಿಜೆಪಿಯ ಶಿಸ್ತುಸಮಿತಿಯು ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ ಹೇಳಲಾಗಿದೆ. ರಾಂಧವಾರ ಹೇಳಿಕೆಗಳ ಬಳಿಕ ತನಗೆ ವೈಯಕ್ತಿಕವಾಗಿ ನೋವಾಗಿದೆ.

ಅವರ ಹೇಳಿಕೆಗಳು ಎಲ್ಲ ಧರ್ಮಗಳನ್ನು ಗೌರವಿಸುವುದರಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ’ಘೋಷಣೆಗೆ ಅನುಗುಣವಾಗಿ ಪ್ರತಿಯೊಬ್ಬರನ್ನು ಜೊತೆಯಲ್ಲಿ ಒಯ್ಯುವುದರಲ್ಲಿ ನಂಬಿಕೆಯಿಟ್ಟಿರುವ ಪಕ್ಷದ ಮೂಲತತ್ತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ರಾಂಧವಾ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದ್ದ ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದ್ರ ರೈನಾ ಹೇಳಿದ್ದಾರೆ.

 ರಾಂಧವಾ ಹೇಳಿಕೆಗಳು ಜಮ್ಮು-ಕಾಶ್ಮೀರದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು,ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎನ್‌ಸಿ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News