ಅಂಬೇಡ್ಕರ್ ಶೋಷಣೆ ಅನುಭವಿಸಿದರೂ ಹಿಂಸೆಯನ್ನು ಪ್ರತಿಪಾದಿಸಿಲ್ಲ: ಭಾರತಿ

Update: 2021-11-02 13:40 GMT

ಬೈಂದೂರು, ನ. 2: ಅತ್ಯಂತ ಬಡತನದ ಶೋಷಿತ ಸಮುದಾಯದಲ್ಲಿ ಹುಟ್ಟಿದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ತನ್ನ ಜೀವನದುದ್ದಕ್ಕೂ ಅಸಮಾನತೆ ಅಸ್ಪೃಶ್ಯತೆಯ ಶೋಷಣೆಗಳನ್ನು ಅನುಭವಿದ್ದರೂ ಕೂಡ ಎಂದೂ ಅವರು ಸಮಾಜಕ್ಕೆ ಹಿಂಸೆಯನ್ನು ಪ್ರತಿಪಾದಿಸಿಲ್ಲ. ಬದಲಾಗಿ ಶಿಕ್ಷಣ ಸಂಘಟನೆ ಹೋರಾಟ ಎಂಬಂತ ಧ್ಯೇಯವನ್ನು ಪ್ರತಿಪಾದಿಸಿ ಸಂವಿಧಾನದ ಮೂಲಕ ಸಮಾಜಕ್ಕೆ ಮಾನವೀಯ ಸಂದೇಶವನ್ನು ಸಾರಿದರು ಎಂದು ಬೈಂದೂರು ತಾಪಂ ಕಾರ್ಯನಿರ್ವಾಣಾಧಿಕಾರಿ ಭಾರತಿ ಹೇಳಿದ್ದಾರೆ

ಬೈಂದೂರು ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೈಂದೂರು ತಾಲೂಕು ಸಮಿತಿ ನೂತನ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಮಾತನಾಡಿ, ಇಂದು ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಆಳುವ ವರ್ಗಗಳು ದಲಿತರು ಹಿಂದುಳಿವರನ್ನು ಧಾರ್ಮಿಕತೆಯ ಕುರುಡು ಕೂಪಕ್ಕೆ ತಳ್ಳಲ್ಪಡುತ್ತಿವೆ. ಇಡಿ ಸರಕಾರದ ಸಾಮಾಜಿಕ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡಿ ಜನ ಸಾಮಾನ್ಯರ ಬದುಕನ್ನು ಕಿತ್ತುಕೊಂಡು ಸಂವಿಧಾನದ ಬದ್ದ ಹಕ್ಕುಗಳನ್ನು ಮೊಟಕು ಗೊಳಿಸಲಾಗುತ್ತಿದೆ. ಇದು ಜಾತಿವಾದಿ ಶಕ್ತಿಗಳನ್ನು ಬಲಿಷ್ಠಗೊಳಿಸಿ ಬಡ ವರ್ಗಗಳನ್ನು ಹತ್ತಿಕ್ಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ತಾಲೂಕು ಸಂಚಾಲಕ ಮಂಜುನಾಥ ನಾಗೂರು ವಹಿಸಿದ್ದರು ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ, ಮಹಾಬಲ ಮಾಸ್ತರ್, ಕಿರುಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ, ಮರವಂತೆ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಂಘಟನಾ ಸಂಚಾಲಕ, ನ್ಯಾಯವಾದಿ ಮಂಜುನಾಥ ಗಿಳಿಯಾರು, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಪಂ ಸದಸ್ಯರಾದ ಮದನ್ ಕುಮಾರ್, ಬೈಂದೂರು ಠಾಣಾಧಿಕಾರಿ ಪವನ್ ಕುಮಾರ್, ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್, ಕುಂದಾಪುರ ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಕುಂದಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಹಾಗೂ ಪುರಸಭಾ ಸದಸ್ಯ ಪ್ರಭಾಕರ ವಿ. ಉಪಸ್ಥಿತರಿದ್ದರು.

ನೂತನ ತಾಲ್ಲೂಕು ಸಂಚಾಲಕರಾಗಿ ನಾಗರಾಜ್ ಉಪ್ಪುಂದ ಹಾಗು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರವಿ ಬನ್ನಾಡಿ ಹೋರಾಟದ ಹಾಡುಗಳನ್ನು ಹಾಡಿದರು. ನಾಗರಜ್ ಸಟ್ವಾಡಿ ಹಾಗೂ ಚೈತ್ರ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News