ಜಿನ್ನಾರನ್ನು ಮೊದಲ ಪ್ರಧಾನಿಯನ್ನಾಗಿಸಿದ್ದರೆ ದೇಶ ವಿಭಜನೆ ತಪ್ಪಿಸಬಹುದಾಗಿತ್ತು ಎಂದ ಬಿಜೆಪಿ ಹಿರಿಯ ನಾಯಕ
ಹೊಸದಿಲ್ಲಿ: ಮುಹಮ್ಮದ್ ಆಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಮಂತ್ರಿಯನ್ನಾಗಿಸಿದ್ದಿದ್ದರೆ ದೇಶದ ವಿಭಜನೆಯನ್ನು ತಡೆಯಬಹುದಾಗಿತ್ತು, ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಆರೆಸ್ಸೆಸ್ ಮುಖವಾಣಿ ಆರ್ಗನೈಝರ್ ಇದರ ಮಾಜಿ ಸಂಪಾದಕ ಶೇಷಾದ್ರಿ ಚಾರಿ ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಬಟೇಲ್ ಅವರ 146ನೇ ಜನ್ಮದಿನಾಚರಣೆಯ ಸಂದರ್ಭ ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು "ದುರದೃಷ್ಟವಶಾತ್ ನಮ್ಮ ನಾಯಕರು ಈ ಕುರಿತು ಚಿಂತಿಸಲಿಲ್ಲ, ಅವರಿಗೆ ಪ್ರಧಾನಿ ಹುದ್ದೆ ಆಫರ್ ಮಾಡಿದ್ದರೆ- ಅವರ ನಂತರ ಯಾರು ಪ್ರಧಾನಿ ಆದರೆಂಬುದು ಬೇರೆ ವಿಚಾರ- ಕನಿಷ್ಠ ದೇಶ ವಿಭಜನೆಯಾಗುತ್ತಿರಲಿಲ್ಲ" ಎಂದು ಹೇಳಿದರು.
"ಸರ್ದಾರ್ ಪಟೇಲ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ ಮತ್ತು ಜಿನ್ನಾ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಬ್ಯಾರಿಸ್ಟರ್‍ಗಳಾದರು. ಅವರು ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಶ್ರಮಿಸಿದರು ಹಾಗೂ ಯಾವುದೇ ಹೋರಾಟದಿಂದ ಹಿಂದೆ ಸರಿದಿರಲಿಲ್ಲ" ಎಂದು ಶೇಷಾದ್ರಿ ಚಾರಿ ಹೇಳಿದರು.
ಜಿನ್ನಾ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಸಿ ಮಾತನಾಡಿದ್ದಕ್ಕಾಗಿ ಇತ್ತೀಚೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ನಾಯಕರಗಳಿಂದ ಟೀಕೆಗೊಳಗಾಗಿರುವ ಹಿನ್ನೆಲೆಯಲ್ಲಿ ಶೇಷಾದ್ರಿ ಚಾರಿ ಅವರ ಹೇಳಿಕೆ ಮಹತ್ವ ಪಡೆದಿದೆ.