ಸಂಸದ ನಳಿನ್ ಕುಮಾರ್ ಬೆಂಗಾವಲು ವಾಹನ-ಬಸ್ ಢಿಕ್ಕಿ: ಚಾಲಕ, ಸಿಬ್ಬಂದಿಗೆ ಗಾಯ
Update: 2021-11-02 20:16 IST
ಮಂಗಳೂರು, ನ.2: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪೊಲೀಸ್ ಬೆಂಗಾವಲು ವಾಹನ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿ ಬೆಂಗಾವಲು ವಾಹನದ ಚಾಲಕ ಹಾಗೂ ಸಿಬ್ಬಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮೂಡುಬಿದಿರೆಯ ಮಿಜಾರು ದಡ್ಡಿ ಎಂಬಲ್ಲಿ ಸಂಭವಿಸಿದೆ.
ಮೂಡುಬಿದಿರೆಯ ಪುತ್ತಿಗೆ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಂಸದರು ಮಂಗಳೂರು ಕಡೆಗೆ ಹಿಂದಿರುಗುತ್ತಿದ್ದಾಗ ಮಿಜಾರು ದಡ್ಡಿ ತಿರುವಿನಲ್ಲಿ ಬೆಂಗಾವಲು ವಾಹನ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಬೆಂಗಾವಲು ವಾಹನದ ಚಾಲಕ ನಾರಾಯಣ ಪ್ರಸಾದ್ ಎಂಬವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಶರಣಪ್ಪ ಇಟಗಿ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.