ಕಡಿಯಾಳಿ-ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪಕ್ಕೆ ಆಗ್ರಹ
ಉಡುಪಿ, ನ.2: ಕಡಿಯಾಳಿಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿ ಈವರೆಗೆ ಬೀದಿದೀಪಗಳನ್ನು ಆಳವಡಿಸದೆ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಇಲಾಖೆಯ ಕ್ರಮವನ್ನು ಖಂಡಿಸಿ ಜಿಲ್ಲಾ ನಾಗರಿಕರ ಸಮಿತಿಯ ವತಿಯಿಂದ ಮಂಗಳವಾರ ಸಂಜೆ ಕುಂಜಿಬೆಟ್ಟು ಎಂಜಿಎಂ ಕಾಲೇಜು ವಿದ್ಯಾರ್ಥಿನಿ ನಿಲಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ನಡುವಿನ ಡಿವೈಡರ್‌ನಲ್ಲಿ ಬೀದಿದೀಪ ಗಳಂತೆ ಹತ್ತಾರು ದೊಂದಿ ಬೆಳಕಿನ ಕಂಬಗಳನ್ನು ಹಿಡಿದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸುವ ಕಾರ್ಯ ನಡೆಸಿದರು. ಸುಮಾರು ಅರ್ಧ ತಾಸುಗಳ ಕಾಲ ಪ್ರತಿಭಟನಕಾರರು ದೊಂದಿ ಬೆಳಕಳನ್ನು ಹಿಡಿದು ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಬೆಳಕು ತೋರಿಸುವ ಅಣಕು ಪ್ರದರ್ಶನ ಮಾಡಿ ಪ್ರತಿಭಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ನಾಗರಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನು ಕೂಡ ಬೀದಿ ದೀಪ ಆಳವಡಿಸಿಲ್ಲ. ಇದರಿಂದಾಗಿ ಕೆಲವು ಪ್ರದೇಶಗಳು ತ್ತಲು ಮಯವಾಗಿದೆ. ಇಂತಹ ಸ್ಥಳಗಳಲ್ಲಿ ಕೆಲವು ಕಿಡಿಗೇಡಿ ಗಳು ಮಹಿಳೆಯರಿಗೆ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ ಈ ಮಾರ್ಗವಾಗಿ ಸಂಚರಿಸುವ ಪಾದಚಾರಿಗಳು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತುಕೊಂಡು ದಾರಿದೀಪ ಆಳವಡಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ನಾಗರಿಕರ ಸಮಿತಿಯ ಪ್ರಮುಖರಾದ ತಾರನಾಥ ಮೆಸ್ತ, ಗುರುರಾಜ್ ಆಚಾರ್ಯ, ಕೆ. ಬಾಲಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.