×
Ad

ಸಮಾಜ ಸೇವಕ ರವಿ ಕಟಪಾಡಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Update: 2021-11-02 21:54 IST

ಕೋಟ ನ.2: ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ ಕೋಟ ವರುಣತೀರ್ಥ ಕೆರೆಯ ಸಮೀಪ ಮಂಗಳವಾರ ಆಯೋಜಿಸಲಾದ 45ನೇ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ ಸಮಾರಂಭದಲ್ಲಿ ಸಮಾಜಸೇವಕ ರವಿ ಕಟಪಾಡಿ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕನ್ನಡ ಭಾಷೆಯ ಏಳು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸಿ ಲಭಿಸಿದೆ. ಇದರ ಅರ್ಥ ನಮ್ಮ ಕನ್ನಡ ಭಾಷೆ ಶ್ರೇಷ್ಠತೆ ಯನ್ನು ಪರಿಚಯಿಸುತ್ತದೆ ಅಲ್ಲದೆ ದೇಶದಲ್ಲೆ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಕೋಟ ಜನತಾ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಕುಂದರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ತಟ್ಟು ಚಿತ್ರಪಾಡಿಯ ಅಘೋರೇಶ್ವರ ಕಲಾರಂಗಕ್ಕೆ ಪಂಚವರ್ಣ ವಿಶೇಷ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಕ್ತದಾನಿ ದಿನೇಶ್ ಬಾಂಧವ್ಯ, ಮೆಸ್ಕಾಂನ ಉಮ್ಮರ್ ಸಾಹೇಬ್, ಪೊಲೀಸ್ ಪ್ರಶಾಂತ್ ಪಡುಕೆರೆ ಮತ್ತು ಖೇಲೋ ಇಂಡಿಯಾ ಕ್ರೀಡಾಪಟು ಸಾತ್ವಿಕ್ ಅವರನ್ನು ಗೌರವಿಸಲಾಯಿತು.

ಮಣೂರು ದಿ.ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ ಮತ್ತು ಮಣಿಪಾಲದ ಸರಳಬೆಟ್ಟು ಅನಾಥಾಶ್ರಮಕ್ಕೆ ಅಕ್ಕಿ, ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸಂಸ್ಥೆಯ ವತಿಯಿಂದ ಓರ್ವ ಬಡ ವಿದ್ಯಾರ್ಥಿಯನ್ನು ಶೈಕ್ಷಣಿಕ ದತ್ತು ಪಡೆಯಲಾಯಿತು.

ಪಂಚವರ್ಣ ಯುವಕ ಮಂಡಲದ ನೂತನ ಲಾಂಛನವನ್ನು ಅನಾವರಣ ಗೊಳಿಸಲಾಯಿತು. ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ. ರಮೇಶ್ ರಾವ್ ಶುಭಾಶಂಸನೆಗೈದರು. ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ ಆಶಯದ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಉದ್ಯಮಿ ಜಯ ರಾಜ್ ವಿ ಶೆಟ್ಟಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಆಚಾರ್ಯ, ಜಿ.ಸತೀಶ್ ಹೆಗ್ಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಮಾಲ್ತಾರ್, ಸಂಘದ ಸ್ಥಾಪಕ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಂಘದ ಗೌರವಾಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ನಿತಿನ್ ಕುಮಾರ್ ವರದಿ ವಾಚಿಸಿದರು. ಗೌರವ ಸಲಹೆಗಾರ ಚಂದ್ರ ಆಚಾರ್ ಸ್ವಾಗತಿಸಿದರು. ಸಂಚಾಲಕ ಅಜಿತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮಂಜುನಾಥ್ ಭಂಡಾರಿ ವಂದಿಸಿದರು.

ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ರಾಘವೇಂದ್ರ ತುಂಗ ಸಹಕರಿಸಿದರು. ನಂತರ ಸಾಲಿಗ್ರಾಮ ಚಿತ್ರಪಾಡಿಯ ಈಶ ಲಾಸ್ಯ ನೃತ್ಯ ತಂಡದವರಿಂದ ನೃತ್ಯ ವೈಭವ ಮತ್ತು ಪ್ರಸಿದ್ಧ ಯಕ್ಷಕಲಾವಿದರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News