ವೆಸ್ಟ್‌ ಬ್ಯಾಂಕ್: ಪೆಲೆಸ್ತೀನಿಯರ ಮನೆಗಳನ್ನು ಅಧಿಕೃತಗೊಳಿಸಿದ ಇಸ್ರೇಲ್

Update: 2021-11-02 18:13 GMT
photo:twitter/@AJEnglish

ಜೆರುಸಲೇಂ, ನ.2: ಆಕ್ರಮಿತ ಪಶ್ಚಿಮದಂಡೆ(ವೆಸ್ಟ್‌ಬ್ಯಾಂಕ್)ಯಲ್ಲಿ ಯೆಹೂದಿ ನಿವಾಸಿಗಳಿಗೆ 3000 ವಸತಿ ನಿರ್ಮಾಣ ಯೋಜನೆಯನ್ನು ಮುಂದುವರಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ , ಈ ಪ್ರದೇಶದಲ್ಲಿರುವ ಪೆಲೆಸ್ತೀನಿಯರ ಸುಮಾರು 1,300 ಮನೆಗಳನ್ನು ಅಧಿಕೃತಗೊಳಿಸುವುದಾಗಿ ಇಸ್ರೇಲ್ ಹೇಳಿದೆ.

ಅಮೆರಿಕದೊಂದಿಗಿನ ಭಿನ್ನಮತ ಕಡಿಮೆಗೊಳಿಸಲು ಹಾಗೂ ಆಡಳಿತಾರೂಢ ಮೈತ್ರಿಕೂಟದ ಮಿತ್ರಪಕ್ಷಗಳ ಅಸಮಾಧಾನವನ್ನು ನಿವಾರಿಸಲು ಮಧ್ಯಮ ಮಾರ್ಗವನ್ನು ಅನುಸರಿಸುವುದಾಗಿ ಇಸ್ರೇಲ್ ಸರಕಾರ ಹೇಳಿದೆ. ಆದರೆ, ಇಸ್ರೇಲ್ ಅಧಿಕೃತಗೊಳಿಸಿದ ಮನೆಗಳು ಅಲ್ಪಪ್ರಮಾಣದ್ದಾಗಿದೆ. ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಪೆಲೆಸ್ತೀನಿಯರು ನಿರ್ಮಿಸಿರುವ ಮನೆಗಳನ್ನು ಅನಧಿಕೃತ ಎಂದು ಘೋಷಿಸಿ ಇಸ್ರೇಲ್ ಸೇನೆ ಕೆಡವುತ್ತಿದೆ ಎಂದು ಪೆಲೆಸ್ತೀನಿಯರು ಮತ್ತು ಮಾನ ಹಕ್ಕು ಸಂಘಟನೆಗಳು ಆಕ್ಷೇಪಿಸಿವೆ.

ಪಶ್ಚಿಮ ದಂಡೆಯಲ್ಲಿ ಪೆಲೆಸ್ತೀನಿಯರು ಮನೆ ನಿರ್ಮಿಸಲು ಇಸ್ರೇಲ್ ಅನುಮತಿ ನೀಡಲಿದೆ ಮತ್ತು ಈಗಾಗಲೇ ಸುಮಾರು 1,300 ಪೆಲೆಸ್ತೀನಿಯರ ಮನೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ ಎಂದು ಇಸ್ರೇಲ್‌ನ ಅಧಿಕಾರಿಗಳು ದೃಢಪಡಿಸಿದ್ದಾರೆ. 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಪಶ್ಚಿಮದಂಡೆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಈ ಪ್ರದೇಶ ಭವಿಷ್ಯದ ಪೆಲೆಸ್ತೀನ್ ದೇಶದ ಪ್ರಮುಖ ಭಾಗವಾಗಬೇಕು ಎಂಬುದು ಪೆಲೆಸ್ತೀನಿಯರ ವಾದವಾಗಿದೆ.

ಈಗ ಈ ಪ್ರದೇಶದಲ್ಲಿ ಸುಮಾರು 2.5 ಬಿಲಿಯನ್ ಪೆಲೆಸ್ತೀನಿಯರು ಮತ್ತು ಸುಮಾರು 5 ಲಕ್ಷ ಯೆಹೂದಿಗಳಿದ್ದಾರೆ. ಇಲ್ಲಿ ಯೆಹೂದಿ ಪ್ರಜೆಗಳನ್ನು ನೆಲೆಗೊಳಿಸಿರುವುದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದು ಪೆಲೆಸ್ತೀನಿಯರು ಹಾಗೂ ಬಹುತೇಕ ಅಂತರಾಷ್ಟ್ರೀಯ ಸಮುದಾಯದ ಅಭಿಪಾ್ರಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News