×
Ad

'ವನ್ ಸನ್ ವನ್ ವರ್ಲ್ಡ್ ವನ್ ಗ್ರಿಡ್' ಭಾರತ- ಬ್ರಿಟನ್ ಜಂಟಿ ಪ್ರಸ್ತಾವ

Update: 2021-11-03 09:47 IST
ಫೋಟೊ : PTI

ಗ್ಲಾಸ್ಗೊ: ಜಾಗತಿಕ ನವೀಕರಿಸಬಹುದಾದ ಇಂಧನ ನಕ್ಷೆಯಲ್ಲಿ ಸೌರ ವಿದ್ಯುತ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಮತ್ತು ಸಣ್ಣ ಅಭಿವೃದ್ಧಿಶೀಲ ದೇಶಗಳು ಕೂಡಾ ಇದರ ಪ್ರಯೋಜನ ಪಡೆಯುವಂತಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, "ವನ್ ಸನ್ ವನ್ ವರ್ಲ್ಡ್ ವನ್ ಗ್ರಿಡ್" ಹೆಸರಿನ ಅಂತರರಾಷ್ಟ್ರೀಯ ಗ್ರಿಡ್ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದ ಸಂದರ್ಭದಲ್ಲಿ ಉಭಯ ದೇಶದ ಪ್ರಧಾನಿಗಳು ಈ ಪ್ರಸ್ತಾವ ಮುಂದಿಟ್ಟಿದ್ದಾರೆ. ಭಾರತದ ಉಪಕ್ರಮವಾದ ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ ಮುಂದಿನ ಕೆಲ ವರ್ಷದೊಳಗೆ ಈ ಗ್ರಿಡ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ತನ್ನ ಹಸಿರು ಗ್ರಿಡ್ ಉಪಕ್ರಮದಲ್ಲಿ ಹಲವು ದೇಶಗಳಿಗೆ ಸೌರ ವಿದ್ಯುತ್ ಸರಬರಾಜು ಮಾಡಲಿದೆ.

ಈ ಗಡಿ ರಹಿತ ಗ್ರಿಡ್ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಭಾರತದ ಪಾತ್ರವನ್ನು ಶ್ಲಾಘಿಸಿದ ಜಾನ್ಸನ್, ಮೋದಿಯವರನ್ನು ಮಾತುಕತೆಗೆ ಆಹ್ವಾನಿಸುವ ವೇಳೆ "ವನ್ ಸನ್ ವನ್ ವರ್ಲ್ಡ್ ವನ್ ಗ್ರಿಡ್ ಮತ್ತು ವನ್ ನರೇಂದ್ರ ಮೋದಿ" ಎಂದು ಬಣ್ಣಿಸಿದರು.

ಭಾರತದ ಬಾಹ್ಯಾಕಾಶ ಸಂಶೋಧನಾ ಏಜೆನ್ಸಿಯಾದ ಇಸ್ರೊ ಸದ್ಯದಲ್ಲೇ ಸೌರ ಕ್ಯಾಲ್ಕ್ಯುಲೇಟರ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಿದ್ದು, ಇದು ಉಪಗ್ರಹ ದತ್ತಾಂಶದ ಆಧಾರದಲ್ಲಿ ದೇಶದ ವಿವಿಧ ಪಡೆಗಳಲ್ಲಿ ಲಭ್ಯವಿರುವ ಸೂರ್ಯ ರಶ್ಮಿಯ ಪ್ರಮಾಣವನ್ನು ನಿಖರವಾಗಿ ಲೆಕ್ಕ ಹಾಕಲಿದೆ. ಇದು ಸೌರ ಚಟುವಟಿಕೆಗಳನ್ನು ಆಯೋಜಿಸಲು ದೇಶಗಳಿಗೆ ನೆರವಾಗಲಿದೆ ಎಂದು ಮೋದಿ ವಿವರಿಸಿದರು.

"ಈ ಸಾಧನದ ಮೂಲಕ ಯಾವುದೇ ದೇಶದ ಸೌರ ಶಕ್ತಿಯ ಸಾಮರ್ಥ್ಯವನ್ನು ಲೆಕ್ಕಹಾಕಬಹುದಾಗಿದೆ. ಇದು ಸೌರ ಯೋಜನೆಗಳ ಸ್ಥಳಗಳನ್ನು ನಿರ್ಧರಿಸಲು ನೆರವಾಗಲಿದ್ದು, ವನ್ ಸನ್ ವನ್ ವರ್ಲ್ಡ್ ವನ್ ಗ್ರಿಡ್ ಉಪಕ್ರಮವನ್ನು ಬಲಪಡಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೂ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಮೋದಿ ಹೇಳಿದರು.

ಜಾಗತಿಕ ಗ್ರಿಡ್ ಪರಿಕಲ್ಪನೆ ಜಾಗತಿಕ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮಾತ್ರವಲ್ಲದೇ, ದಹಿಸುವ ಇಂಧನವನ್ನು ಆಧರಿಸಿ ನಡೆದ ಕೈಗಾರಿಕೀಕರಣ ಪ್ರಕೃತಿಯ ವಿನಾಶಕ್ಕೆ ಕಾರಣವಾಗಿದ್ದು, ಇದು ಭೌಗೋಳಿಕ-ರಾಜಕೀಯ ಸಂಘರ್ಷಕ್ಕೂ ಕಾರಣವಾದ ಪರಿಸ್ಥಿತಿಗಿಂತ ಭಿನ್ನವಾಗಿ ಸೌರ ವಿದ್ಯುತ್‌ನ ಗರಿಷ್ಠ ಪ್ರಯೋಜನವನ್ನು ಪಡೆಯಲು ಕೂಡಾ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News