ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿ ಬಳಕೆಗೆ ತಾಲಿಬಾನ್ ನಿಷೇಧ

Update: 2021-11-03 05:05 GMT

ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳ ಬಳಕೆಯನ್ನು ನಿಷೇಧಿಸಿ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದ್ದು, ಇದು ಈಗಾಗಲೇ ಅಸ್ತವ್ಯಸ್ತಗೊಂಡಿರುವ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗುವ ಸಾಧ್ಯತೆ ಇದೆ.

ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಸಂಘಟನೆ ದೇಶದ ಆಡಳಿತ ಸೂತ್ರವನ್ನು ವಶಕ್ಕೆ ಪಡೆದ ಬಳಿಕ ದೇಶದ ಕರೆನ್ಸಿಯ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡಿದ್ದು, ವಿದೇಶಗಳಲ್ಲಿ ದೇಶದ ಮೀಸಲು ಸಂಪೂರ್ಣ ಕ್ಷೀಣಿಸಿದೆ.

ದೇಶದ ಆರ್ಥಿಕತೆ ತತ್ತರಿಸಿದ್ದು, ಬ್ಯಾಂಕ್‌ಗಳನ್ನು ನಗದು ಕೊರತೆ ಕಾಡುತ್ತಿದೆ. ಅಂತರರಾಷ್ಟ್ರೀಯ ಸಮುದಾಯ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಲು ನಿರಾಕರಿಸಿವೆ.

ಏತನ್ಮಧ್ಯೆ ದೇಶದ ಒಳಗೆ ಹಲವು ವಹಿವಾಟುಗಳು ಅಮೆರಿಕನ್ ಡಾಲರ್ ಮೂಲಕ ನಡೆಯುತ್ತಿದ್ದು, ದಕ್ಷಿಣ ಗಡಿಯಲ್ಲಿ ಪಾಕಿಸ್ತಾನ ರೂಪಾಯಿಯಲ್ಲಿ ವಹಿವಾಟು ನಡೆಯುತ್ತಿದೆ. ಆದರೆ ತಾಲಿಬಾನ್ ವಕ್ತಾರ ಝುಬೈದುಲ್ಲಾ ಮುಜಾಹಿದ್ ಪತ್ರಿಕಾ ಹೇಳಿಕೆ ನೀಡಿ, ದೇಶೀಯ ವ್ಯವಹಾರದಲ್ಲಿ ವಿದೇಶಿ ಕರೆನ್ಸಿ ಬಳಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಆರ್ಥಿಕ ಸ್ಥಿತಿ ಮತ್ತು ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಎಲ್ಲರೂ ಪ್ರತಿ ವಹಿವಾಟಿನಲ್ಲಿ ಅಫ್ಘಾನಿ ಕರೆನ್ಸಿಯನ್ನೇ ಬಳಸಬೇಕು ಎಂದು ಅವರು ಸೂಚಿಸಿದ್ದಾರೆ. ಈ ಸಂಬಂಧ ಎಲ್ಲ ನಾಗರಿಕರಿಗೆ, ಅಂಗಡಿ ಮಾಲಕರಿಗೆ, ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News