‘ಆಲ್ಟ್ ನ್ಯೂಸ್’ ಲೇಖನ ತೆಗೆದುಹಾಕುವಂತೆ ‘ದೈನಿಕ್ ಜಾಗರಣ್’ ಮಾಡಿದ ಮನವಿ ತಿರಸ್ಕರಿಸಿದ ನ್ಯಾಯಾಲಯ

Update: 2021-11-03 07:23 GMT
Photo: Twitter/@barandbench

ಹೊಸದಿಲ್ಲಿ: ಕೋವಿಡ್ ಎರಡನೇ ಅಲೆಯಿಂದಾಗಿ ಗಂಗಾ ನದಿಯ ತಟದಲ್ಲಿ ಶವಗಳ ಸಾಮೂಹಿಕ ದಫನ ನಡೆದಿಲ್ಲ ಎಂದು ‘ದೈನಿಕ್ ಜಾಗರಣ್’ ವರದಿ ಮಾಡಿದ್ದನ್ನು ಅಲ್ಲಗಳೆದು ‘ಆಲ್ಟ್ ನ್ಯೂಸ್’ ಮೇ ತಿಂಗಳಲ್ಲಿ ಪ್ರಕಟಿಸಿದ ಲೇಖನವನ್ನು ತೆಗೆದುಹಾಕಬೇಕೆಂದು ‘ದೈನಿಕ್ ಜಾಗರಣ್’ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ವಜಾಗೊಳಿಸಿದೆ ಎಂದು Bar and Bench ವರದಿ ಮಾಡಿದೆ.

“ಈ ಪ್ರಾಥಮಿಕ ಹಂತದಲ್ಲಿ ಹಸ್ತಕ್ಷೇಪ ನಡೆಸಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ನ್ಯಾಯಾಲಯಕ್ಕೆ ಯಾವುದೇ ಕಾರಣಗಳಿಲ್ಲ,'' ಎಂದು ಸಿವಿಲ್ ನ್ಯಾಯಾಧೀಶೆ ಚಿತ್ರಾಂಶಿ ಅರೋರ ಹೇಳಿದ್ದಾರೆ.

ಗಂಗಾ ನದಿಯ ತಟದಲ್ಲಿ ಸಾಮೂಹಿಕ ದಫನಗಳು ಹಿಂದಿನಿಂದಲೂ ನಡೆಯುತ್ತಿವೆ ಹಾಗೂ ಆನ್‍ಲೈನ್ ಮಾಧ್ಯಮಗಳು ಈ ವಿಚಾರವನ್ನು ವೈಭವೀಕರಿಸಿ ಓದುಗರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ಬಿಂಬಿಸಲು ‘ದೈನಿಕ್ ಜಾಗರಣ್’ ಸರಣಿ ವರದಿಗಳನ್ನು ಪ್ರಕಟಿಸಿದೆ,'' ಎಂದು ‘ಆಲ್ಟ್ ನ್ಯೂಸ್’ ಮೇ 30ರಂದು ಪ್ರಕಟಗೊಂಡ ತನ್ನ ಲೇಖನದಲ್ಲಿ ತಿಳಿಸಿದೆ.

ತನ್ನ ಗೌರವಕ್ಕೆ ಚ್ಯುತಿ ತರಲು ‘ಆಲ್ಟ್ ನ್ಯೂಸ್’ ಯತ್ನಿಸುತ್ತಿದೆ ಹಾಗೂ ಸುಳ್ಳು ಹೇಳಿಕೆಗಳನ್ನು ತನ್ನ ವರದಿಯಲ್ಲಿ ಪ್ರಕಟಿಸಿದೆ ಎಂದು ‘ದೈನಿಕ್ ಜಾಗರಣ್’ ಆರೋಪಿಸಿತ್ತು.

ಆದರೆ ಈ ಆರೋಪವನ್ನು ನಿರಾಕರಿಸಿದ್ದ ‘ಆಲ್ಟ್ ನ್ಯೂಸ್’,ತನ್ನ ಲೇಖನವು ತಳಮಟ್ಟದಲ್ಲಿ ತನಿಖೆ ಹಾಗೂ ವಿಸ್ತೃತ ಸಂಶೋಧನೆಯ ನಂತರ ಪ್ರಕಟಗೊಂಡಿದೆ ಹಾಗೂ ಇದನ್ನು ತೆಗೆದು ಹಾಕುವಂತೆ ‘ದೈನಿಕ್ ಜಾಗರಣ್’ ಹೇಳುವುದು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ವಾದಿಸಿತ್ತು.

“ಆಲ್ಟ್ ನ್ಯೂಸ್ ತನ್ನ ವರದಿಯನ್ನು ಹಲವಾರು ಸಂದರ್ಶನಗಳನ್ನು ಆಧರಿಸಿ ಪ್ರಕಟಿಸಿತ್ತು. ಅವರು ತಮ್ಮ ವಾದವನ್ನು ಪುಷ್ಠೀಕರಿಸಲು ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಈ ಹಂತದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News