ಕೋವಿಡ್ ಲಸಿಕೆಗಳನ್ನು ಮನೆ-ಮನೆಗೆ ತೆಗೆದುಕೊಂಡು ಹೋಗಬೇಕು: ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

Update: 2021-11-03 15:10 GMT

ಹೊಸದಿಲ್ಲಿ,ನ.3: ಕೋವಿಡ್ ಲಸಿಕೆಗಳನ್ನು ಈಗ ಮನೆ ಮನೆಗೆ ಒಯ್ಯಬೇಕು ಮತ್ತು ಇದೇ ವೇಳೆ ಎರಡನೇ ಡೋಸ್ ಬಗ್ಗೆ ಸಮಾನ ಗಮನವನ್ನು ಕೇಂದ್ರೀಕರಿಸಬೇಕು ಎಂದು ಬುಧವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ಈ ಅಭಿಯಾನದಲ್ಲಿ ಧಾರ್ಮಿಕ ನಾಯಕರು ಹಾಗೂ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ನಂತಹ ಯುವ ಸಂಘಟನೆಗಳನ್ನೂ ತೊಡಗಿಸಿಕೊಳ್ಳುವಂತೆ ಸೂಚಿಸಿದರು.

ಜನರಿಗೆ,ವಿಶೇಷವಾಗಿ ಕಾಯಿಲೆಪೀಡಿತ ಜನರು ಅಥವಾ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದವರಿಗಾಗಿ ಮನೆ ಮನೆಗೆ ತೆರಳಿ ಲಸಿಕೆ ನೀಡಲು ಅವಕಾಶಕ್ಕಾಗಿ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಕೇಂದ್ರವನ್ನು ಕೋರಿದ್ದವು.

ಲಸಿಕೆ ನೀಡಿಕೆ ಪ್ರಮಾಣ ಶೇ.50ಕ್ಕೂ ಕಡಿಮೆಯಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಮೋದಿ,ಈವರೆಗೆ ನೀವೆಲ್ಲ ಜನರನ್ನು ಲಸಿಕೆ ಕೇಂದ್ರಗಳಿಗೆ ಕರೆತರಲು ವ್ಯವಸ್ಥೆಗಳನ್ನು ಮಾಡಿದ್ದೀರಿ. ಈಗ ಲಸಿಕೆಗಳನ್ನು ಪ್ರತಿ ಮನೆಯ ಬಾಗಿಲಿಗೆ ಒಯ್ಯಬೇಕು ಎಂದರು.

ಕಡಿಮೆ ಲಸಿಕೆ ನೀಡಿರುವ ಜಾರ್ಖಂಡ್,ಮಣಿಪುರ,ನಾಗಾಲ್ಯಾಂಡ್,ಅರುಣಾಚಲ ಪ್ರದೇಶ,ಮಹಾರಾಷ್ಟ್ರ,ಮೇಘಾಲಯ ಮತ್ತು ಇತರ ರಾಜ್ಯಗಳ 40ಕ್ಕೂ ಅಧಿಕ ಜಿಲ್ಲಾಧಿಕಾರಿಗಳು ತಮ್ಮ ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಉಚಿತ ಲಸಿಕೆ ಅಭಿಯಾನದಡಿ ನಾವು ಒಂದೇ ದಿನದಲ್ಲಿ ಸುಮಾರು 2.5 ಕೋಟಿ ಡೋಸ್ ಲಸಿಕೆಯನ್ನು ನೀಡಿದ್ದೇವೆ. ಇದು ನಮ್ಮ ಸಾಮರ್ಥ್ಯವನ್ನು ತೋರಿಸುತ್ತಿದೆ ’ ಎಂದು ಹೇಳಿದ ಮೋದಿ,ನಾವೀಗ ‘ಪ್ರತಿ ಮನೆಗೆ ಲಸಿಕೆ,ಮನೆಮನೆಗೆ ಲಸಿಕೆ ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಯೊಂದೂ ಮನೆಯನ್ನು ತಲುಪಬೇಕಿದೆ ಎಂದು ಹೇಳಿದರು.

‘ಪ್ರತಿ ಜಿಲ್ಲೆ,ಪ್ರತಿ ಪಟ್ಟಣದ ಮೇಲೂ ನಾವು ಗಮನವನ್ನು ಕೇಂದ್ರೀಕರಿಸಬೇಕಿದೆ. ಪ್ರತಿ ಗ್ರಾಮಕ್ಕೆ ವಿಭಿನ್ನ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದ್ದರೆ ಹಾಗೆಯೇ ಮಾಡಿ. ನೀವು 25 ಜನರ ತಂಡಗಳನ್ನು ರಚಿಸಬಹುದು, ನೀವು ಎನ್‌ಸಿಸಿ ಮತ್ತು ಎನ್‌ಎಸ್ ಎಸ್‌ಗಳ ನೆರವನ್ನೂ ಪಡೆಯಬಹುದು. ನಾವು ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಿಸಬೇಕಿದೆ ’ಎಂದು ಅಧಿಕಾರಿಗಳಿಗೆ ಸೂಚಿಸಿದ ಮೋದಿ,ಮನೆಮನೆಗೆ ತೆರಳಿ ಲಸಿಕೆಯನ್ನು ನೀಡುವ ಜೊತೆಗೆ ಜನರು ತಮ್ಮ ಎರಡನೇ ಡೋಸ್ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಸಾಂಕ್ರಾಮಿಕದ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಕೆಲವೊಮ್ಮೆ ಲಸಿಕೆಯನ್ನು ತುರ್ತಾಗಿ ಪಡೆದುಕೊಳ್ಳುವ ಆಸಕ್ತಿಯೂ ಕಡಿಮೆಯಾಗುತ್ತದೆ. ಈಗಲೇ ಅವಸರವೇನು,ನಿಧಾನಕ್ಕೆ ಪಡೆದರಾಯಿತು ಎಂದು ಜನ ಭಾವಿಸಲು ಆರಂಭಿಸುತ್ತಾರೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News