ಅಪಹರಣಕ್ಕೊಳಗಾಗಿ 18 ದಿನಗಳ ಬಳಿಕ ಪತ್ತೆಯಾದ 4 ವರ್ಷದ ಬಾಲಕಿ

Update: 2021-11-03 11:37 GMT
Photo: Twitter/@7NewsPerth

ಸಿಡ್ನಿ: ಆಸ್ಟ್ರೇಲಿಯಾದ ಖ್ವುಬ್ಬ ಬ್ಲೊಹೋಲ್ಸ್ ಎಂಬ ಕ್ಯಾಂಪ್ ಸ್ಥಳವೊಂದರಲ್ಲಿ ತನ್ನ ಕುಟುಂಬವಿದ್ದ ಟೆಂಟ್ನಿಂದ ಅಕ್ಟೋಬರ್ 16ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳು 18 ದಿನಗಳ ನಂತರ ಬೀಗ ಹಾಕಲಾಗಿದ್ದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಆರೋಗ್ಯದಿಂದಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಅಪಹರಿಸಿದ್ದನೆಂದು ತಿಳಿಯಲಾಗಿರುವ 36 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.

ಬಾಲಕಿ ನಾಪತ್ತೆಯಾಗಿದ್ದ ಪಟ್ಟಣದಲ್ಲಿನ ಒಂದು ಮನೆಯ ಬೀಗವೊಡೆದು ಬುಧವಾರ ಮುಂಜಾನೆ ಪೊಲೀಸರು ಶೋಧಿಸಿದಾಗ ಬಾಲಕಿ ಕ್ಲಿಯೋ ಕೊಠಡಿಯೊಂದರಲ್ಲಿ ಪತ್ತೆಯಾಗಿದ್ದಳು.

ಬಾಲಕಿ ನಾಪತ್ತೆಯಾದಾಗಿನಿಂದ ಕಂಗಾಲಾಗಿದ್ದ ಆಕೆಯ ತಾಯಿ ಎಲ್ಲೀ ಸ್ಮಿತ್ ತಮ್ಮ ಕುಟುಂಬ ಈಗ ಮತ್ತೆ ಪೂರ್ಣಗೊಂಡಿದೆ ಎಂದು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಬರೆದಿದ್ದಾರೆ. ಬಾಲಕಿಯನ್ನು ಅಪಹರಿಸಿದ್ದನೆಂದು ತಿಳಿಯಲಾದ ವ್ಯಕ್ತಿಗೂ ಬಾಲಕಿಯ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಪತ್ತೆಯಾದ ಮನೆ ಆಕೆಯ ಮನೆಯಿಂದ ಸ್ವಲ್ಪವೇ ದೂರದಲ್ಲಿದೆ. ಬಾಲಕಿ ನಾಪತ್ತೆಯಾದ ಕ್ಯಾಂಪಿಂಗ್ ಸ್ಥಳಕ್ಕೆ ಆಕೆಯ ಕುಟುಂಬ ರಜೆಯನ್ನು ಕಳೆಯಲು ಆಗಮಿಸಿದ್ದ ಸಂದರ್ಭ ಅಪಹರಣ ನಡೆದಿತ್ತು. ಈ ಅಪಹರಣ ಸುದ್ದಿ ಆಸ್ಟ್ರೇಲಿಯಾದ್ಯಂತ ಭಾರೀ ಸುದ್ದಿ ಮಾಡಿತ್ತಲ್ಲದೆ ಬಾಲಕಿ ಆದಷ್ಟು ಬೇಗ ಪತ್ತೆಯಾಗಲಿ ಎಂದು ಜನರು ಹಾರೈಸಿದ್ದರು. ಆಕೆಯ ಕುರಿತು ಮಾಹಿತಿ ನೀಡಿದವರಿಗೆ ಆಸ್ಟ್ರೇಲಿಯನ್ ಒಂದು ಮಿಲಿಯನ್ ಡಾಲರ್ ಬಹುಮಾನವನ್ನೂ ಘೋಷಿಸಲಾಗಿತ್ತು.

ಆಕೆಯನ್ನೇಕೆ ಅಪಹರಿಸಲಾಯಿತು ಎಂಬ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಬಾಲಕಿ ಯಾವುದೇ ತೊಂದರೆಯಿಲ್ಲದೆ ಪತ್ತೆಯಾಗಿರುವುದು ಆಕೆಯ ಪಟ್ಟಣದ ಜನರನ್ನು ಖುಷಿ ಪಡಿಸಿದೆಯಲ್ಲದೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆಕೆ ಪತ್ತೆಯಾಗಿದ್ದನ್ನು ಇಡೀ ಊರೇ ಸಂಭ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News