×
Ad

ಉಡುಪಿ; ಬೆಲೆ ಏರಿಕೆ ಮಧ್ಯೆಯೂ ದೀಪಾವಳಿ ಹಬ್ಬದ ಖರೀದಿ: ತರಕಾರಿ, ಹೂವು ದರ ಹೆಚ್ಚಳ

Update: 2021-11-03 19:02 IST

ಉಡುಪಿ, ನ.3: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ಮಧ್ಯೆಯೂ ಜಿಲ್ಲೆಯ ಜನ ದೀಪಾವಳಿ ಹಬ್ಬಕ್ಕಾಗಿ ಹೂ ಹಣ್ಣು, ತರಕಾರಿ, ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಜೆ ವೇಳೆ ಸುರಿದ ಭಾರಿ ಮಳೆಯಿಂದಾಗಿ ಸಾರ್ವ ಜನಿಕರು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು.

ಹಬ್ಬಕ್ಕೆ ಹೂವು ಹಾಗೂ ತರಕಾರಿ ಬೆಲೆಯಲ್ಲಿ ಸ್ಪಲ್ಪ ಮಟ್ಟಿಗೆ ಏರಿಕೆಯಾಗಿದೆ. ನಗರದ ಕೆಎಂ ಮಾರ್ಗ, ರಥಬೀದಿ, ಮಣಿಪಾಲ, ವುಡ್ ಲ್ಯಾಂಡ್ ರೋಡ್ ಸೇರಿದಂತೆ ನಗರದ ವಿವಿಧ ರಸ್ತೆ ಬದಿಗಳಲ್ಲಿ ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ವ್ಯಾಪಾರಿಗಳು ಹೂವು ಮಾರಾಟ ಮಾಡುತ್ತಿದ್ದಾರೆ.

ಈ ಹಿಂದಿನ ಹಬ್ಬಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿಗೆ ಹೂವು ಹಾಗೂ ತರಕಾರಿ ದರದಲ್ಲಿ ಸುಮಾರು 15ರಿಂದ 20ರೂ. ಏರಿಕೆ ಯಾಗಿದೆ. ಈ ಬಾರಿ ಬೆಂಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಉಡುಪಿಗೆ ಬರುತ್ತಿದ್ದ ಹೂವಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ 80 ರೂ., ಜೀನಿಯಾ 70 ರೂ., ಗೊಂಡೆ 80 ರೂ., ಬಿಳಿ ಸೇವಂತಿಗೆ 80ರೂ., ಗುಲಾಬಿ 100 ರೂ., ಮಾರಿಗೋಲ್ಡ್ 120 ರೂ.ಗೆ ಮಾರಾಟವಾಗುತ್ತಿವೆ ಎನ್ನುತ್ತಾರೆ ಹೂವು ವ್ಯಾಪಾರಿಗಳು.

ನಗರದ ವಿವಿಧ ಬೀದಿಗಳಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಹಣತೆ ಖರೀದಿ ಜೋರಾಗಿ ಕಂಡುಬಂದಿದೆ. ತರಕಾರಿ, ಹೂ, ಹಣ್ಣಿನ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೀನ್ಸ್ 60 ರೂ., ಬೆಂಡೆ 60 ರೂ., ಅಲಸಂಡೆ 60 ರೂ., ಟೊಮೆಟೋ 50 ರೂ., ಈರುಳ್ಳಿ 40 ರೂ., ಆಲೂಗಡ್ಡೆ 30 ರೂ., ಸೌತೆಕಾಯಿ 30 ರೂ., ಬದನೆಕಾಯಿ 80 ರೂ., ಕುಂಬಳಕಾಯಿ 30 ರೂ., ತೊಂಡೆಕಾಯಿ 60 ರೂ. ಇದೆ. ಸೇಬು 120ರೂ, ಕಿತ್ತಾಳೆ 60ರೂ., ಚಿಕ್ಕು 60 ರೂ., ಪೇರಲೆ 70, ದಾಳಿಂಬೆ 160, ಬಾಳೆ ಹಣ್ಣು 70 ರೂ.ಗೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಡುವ ಬಿಸಿಲಿನ ವಾತಾವರಣ ಇದ್ದರೆ, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ಹಬ್ಬದ ಖರೀದಿಗಾಗಿ ನಗರಕ್ಕೆ ಬಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಅದೇ ರೀತಿ ಬೀದಿ ಬದಿಗಳಲ್ಲಿ ಹೂವು ಮಾರಾಟ ಮಾಡುತ್ತಿದ್ದ ನೂರಾರು ಹೂವು ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದರು. ಈ ಮಧ್ಯೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಕೂಡ ಉಂಟಾಯಿತು.

ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

ಸರಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ ಹಸಿರು ಪಟಾಕಿ ಹೊರತು ಇತರೆ ಪಟಾಕಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲೆಯ ಹಲವೆಡೆ ಹಸಿರು ಪಾಕಿ ಮಳಿಗೆ ಗಳನ್ನು ತೆರೆಯಲಾಗಿದೆ.
ಈ ಸಂಬಂಧ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಂದಾಯ ಇಲಾಖೆ ತಹಶೀಲ್ದಾರ್/ ಕಂದಾಯ ನಿರೀಕ್ಷಕರು, ಪೊಲೀಸ್ ಇಲಾಖೆ, ನಗರಾಡಳಿತ ಹಾಗೂ ಪರಿಸರ ಎಂಜಿನಿಯರ್, ಪಿಡಿಒ ನೇತೃತ್ವದಲ್ಲಿ ಸಮಿತಿ ರಚನೆ ಮಾಡ ಲಾಗಿದೆ. ಜಿಲ್ಲಾಡಳಿತದಿಂದ ಈವರೆಗೆ 100 ಪಟಾಕಿ ಅಂಗಡಿಗಳಿಗೆ ಪರವಾನಿಗೆ ಪಡೆದುಕೊಳ್ಳಲಾಗಿದೆ. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News