ದೀಪಾವಳಿಯ ಐತಿಹಾಸಿಕ, ಧಾರ್ಮಿಕ ಮಹತ್ವಕ್ಕೆ ಮನ್ನಣೆ ಕೋರಿ ಅಮೆರಿಕ ಕಾಂಗ್ರೆಸ್‌ನಲ್ಲಿ ನಿರ್ಣಯ ಮಂಡನೆ

Update: 2021-11-03 17:23 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್,ನ.3: ಬೆಳಕಿನ ಹಬ್ಬವಾದ ದೀಪಾವಳಿಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮನ್ನಣೆ ನೀಡಬೇಕೆಂದು ಕೋರುವ ನಿರ್ಣಯವನ್ನು ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಸಂಸದ ರಾಜಾ ಕೃಷ್ಣ ಮೂರ್ತಿ ಮಂಗಳವಾರ ಮಂಡಿಸಿದ್ದಾರೆ.

ಅಮೆರಿಕದಲ್ಲಿ ಹಾಗೂ ಜಗತ್ತಿನಾದ್ಯಂತ ನೆಲೆಸಿರುವ ಸಿಖ್ಖರು, ಜೈನರು ಹಾಗೂ ಹಿಂದೂಗಳಿಗೆ ದೀಪಾವಳಿಯು ಕತ್ತಲೆಯ ವಿರುದ್ಧ ಬೆಳಕಿನ ಹಾಗೂ ಕೆಡುಕಿನ ವಿರುದ್ಧ ಒಳಿತಿನ ಗೆಲುವನ್ನು ಸಾರುವ ಹಬ್ಬವಾಗಿದೆ ಎಂದು ಕೃಷ್ಣಮೂರ್ತಿ ಅವರು ಸದನದಲ್ಲಿ ನಿರ್ಣಯವನ್ನು ಮಂಡಿಸುತ್ತಾ ತಿಳಿಸಿದರು.

ದೀಪಾವಳಿಯ ಅಗಾಧವಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪ್ರಾಮುಖ್ಯತೆಗೆ ಮನ್ನಣೆಯನ್ನು ನೀಡುವುದಕ್ಕಾಗಿ ಈ ದ್ವಿಪಕ್ಷೀಯ ನಿರ್ಣಯವನ್ನು ಮಂಡಿಸಲು ನನಗೆ ಹೆಮ್ಮೆಯಾಗುತ್ತಿದೆ’’ ಎಂದು ಕೃಷ್ಣಮೂರ್ತಿ ತಿಳಿಸಿದರು.

ಕೋವಿಡ್19 ಸಾಂಕ್ರಾಮಿಕದ ಸಮಯದಲ್ಲಿ ನಾವು ಮತ್ತೊಮ್ಮೆ ದೀಪಾವಳಿ ಆಚರಿಸುತ್ತಿದ್ದೇವೆ. ಜಗತ್ತಿನಾದ್ಯಂತ ಆವರಿಸಿರುವ ಕತ್ತಲನ್ನು ಬೆಳಕು ಮರೆಮಾಡುವುದನ್ನು ನಾವು ಕಾಣತೊಡಗುತ್ತೇವೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ. ತಮ್ಮ ಪ್ರೀತಿಪಾತ್ರರೊಂದಿಗೆ ಸಕುಟುಂಬಿಕರಾಗಿ ಮನೆಗಳಲ್ಲಿ ದೀಪವನ್ನು ಬೆಳಗಿಸಿ, ಎಲ್ಲ ಜನರಿಗೂ ಉತ್ತಮ ಆರೋಗ್ಯ ಹಾಗೂ ಶಾಂತಿಗಾಗಿ ಪ್ರಾರ್ಥಿಸುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಸಂತಸದ ದೀಪಾವಳಿಯನ್ನು ನಾನು ಹಾರೈಸುತ್ತಿದ್ದೇನೆ ಎಂದು ಕೃಷ್ಣಮೂರ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News