ಮಹಾತ್ಮ ಗಾಂಧಿ ಸ್ಮರಣಾರ್ಥ 5 ಯೂರೋ ನಾಣ್ಯವನ್ನು ಬಿಡುಗಡೆ ಮಾಡಿದ ಯುಕೆ

Update: 2021-11-04 16:01 GMT

ಲಂಡನ್, ನ.3: ದೀಪಾವಳಿಯ ಸಂದರ್ಭದಲ್ಲಿ ಮಹಾತ್ಮಾಗಾಂಧೀಜಿಯವರ ಬದುಕು ಮತ್ತು ಸಂದೇಶದ ಸ್ಮರಣಾರ್ಥ ಹೊಸ 5 ಪೌಂಡ್‌ಸ್ಟರ್ಲಿಂಗ್ ವೌಲ್ಯದ ನಾಣ್ಯವನ್ನು ಬ್ರಿಟನ್ ಸರಕಾರ ಬಿಡುಗಡೆಗೊಳಿಸಿದೆ.

ಚಿನ್ನ, ಬೆಳ್ಳಿ ಸಹಿತ ವಿವಿಧ ಗುಣಮಟ್ಟದಲ್ಲಿ ದೊರಕುವ ಈ ನಾಣ್ಯವನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದು ಭಾರತದ ರಾಷ್ಟ್ರೀಯ ಪುಷ್ಪ ತಾವರೆ ಹಾಗೂ ಗಾಂಧೀಜಿಯ ಪ್ರಸಿದ್ಧ ಉಲ್ಲೇಖ ‘ನನ್ನ ಬದುಕು ನನ್ನ ಸಂದೇಶ’ವನ್ನು ಈ ನಾಣ್ಯ ಒಳಗೊಂಡಿದೆ ಎಂದು ಹೊಸದಿಲ್ಲಿಯಲ್ಲಿರುವ ಬ್ರಿಟನ್ ಹೈಕಮಿಷನ್‌ನ ಹೇಳಿಕೆ ತಿಳಿಸಿದೆ.

ಜಗತ್ತಿನೆಲ್ಲೆಡೆಯ ಮಿಲಿಯಾಂತರ ಜನರಿಗೆ ಪ್ರೇರಣೆಯಾಗಿರುವ ಪ್ರಭಾವೀ ಮುಖಂಡನಿಗೆ ನೀಡುವ ಸೂಕ್ತ ಗೌರವ ಇದಾಗಿದೆ.

ಹಿಂದು ಧರ್ಮೀಯನಾಗಿರುವ ನನಗೆ ದೀಪಾವಳಿಯಂದು ಈ ನಾಣ್ಯವನ್ನು ಬಿಡುಗಡೆಗೊಳಿಸಲು ಹೆಮ್ಮೆಯೆನಿಸುತ್ತದೆ. ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನೇತಾರರಾಗಿದ್ದ ಗಾಂಧೀಜಿಯವರ ಅಸಾಧಾರಣ ಬದುಕನ್ನು ಸ್ಮರಿಸುವ ನಾಣ್ಯವನ್ನು ಬ್ರಿಟನ್‌ನಲ್ಲಿ ಇದೇ ಮೊದಲ ಬಾರಿಗೆ ಬಿಡುಗಡೆಗೊಳಿಸಿರುವುದು ಮಹತ್ವದ ಘಟನೆಯಾಗಿದೆ ಎಂದು ಬ್ರಿಟನ್ ಛಾನ್ಸಲರ್ ರಿಷಿ ಸುನಾಕ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧೀಜಿಯವರ ಸ್ಮರಣಾರ್ಥ ಬ್ರಿಟನ್ ಸರಕಾರದ ಅಧಿಕೃತ ನಾಣ್ಯ ಬಿಡುಗಡೆಗೊಳಿಸಿದೆ.

 ಭಾರತ ಈ ವರ್ಷ ಸ್ವಾತಂತ್ರ್ಯದ 75ನೇ ದಿನಾಚರಣೆಯ ಸಂಭ್ರಮದಲ್ಲಿದೆ. ಬ್ರಿಟನ್‌ನ ರಾಯಲ್ ಮಿಂಟ್(ನಾಣ್ಯ ಮುದ್ರಿಸುವ ಟಂಕಸಾಲೆ)ನ ದೀಪಾವಳಿ ಸಂಗ್ರಹಕ್ಕೆ ಗಾಂಧೀಜಿ ನಾಣ್ಯ ಮತ್ತೊಂದು ಸೇರ್ಪಡೆಯಾಗಿದೆ. 20 ಗ್ರಾಂ ತೂಕದ ಲಕ್ಷ್ಮೀ ದೇವಿಯ ಚಿನ್ನದ ಗಟ್ಟಿ, ಮೆಹಂದಿಯ ಶೈಲಿಯಲ್ಲಿ ಪ್ಯಾಕ್ ಮಾಡಲಾಗಿರುವ 1 ಕಿ.ಗ್ರಾಂ ಮತ್ತು 5 ಕಿ.ಗ್ರಾಂ ತೂಕದ ಚಿನ್ನದ ಗಟ್ಟಿಗಳು ರಾಯಲ್ ಮಿಂಟ್‌ನ ದೀಪಾವಳಿ ಸಂಗ್ರಹದಲ್ಲಿವೆ. ಭಾರತ- ಬ್ರಿಟನ್ ನಡುವಿನ ಚಿರಸ್ಥಾಯಿ ಸಂಬಂಧ ಹಾಗೂ ಸಾಂಸ್ಕತಿಕ ಸಂಪರ್ಕಗಳ ಚೌಕಟ್ಟಿನ ಆಧಾರದಲ್ಲಿ ವಿನ್ಯಾಸಗೊಳಿಸಿರುವ ಮಹಾತ್ಮಾ ಗಾಂಧೀಜಿಯವರ ನಾಣ್ಯವನ್ನು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಗೊಳಿಸಲು ಸಂತಸವಾಗುತ್ತಿದೆ ಎಂದು ರಾಯಲ್ ಮಿಂಟ್‌ನ ಮುಖ್ಯ ಕಸ್ಟಮ್ಸ್ ಅಧಿಕಾರಿ ನಿಕೊಲಾ ಹೊವೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News